ಕಾರ್ಯಾಚರಣೆ ವೇಳೆ ಪತ್ತೆಯಾದ ಅವಶೇಷಗಳು ಯಾವುದರದ್ದು ಗೊತ್ತಾ?
ಸಿಡ್ನಿ, ಮೇ 3: ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನಕ್ಕಾಗಿ ಹಿಂದೂ ಮಹಾಸಾಗರದಲ್ಲಿ ನಡೆಸಲಾದ ಶೋಧ ಕಾರ್ಯಾಚರಣೆಯ ವೇಳೆ ಎರಡು ಹಡಗುಗಳ ಅವಶೇಷಗಳು ಪತ್ತೆಯಾಗಿವೆ.
ಈ ಹಡಗುಗಳನ್ನು ಗುರುವಾರ 19ನೇ ಶತಮಾನದ ವಾಣಿಜ್ಯ ಹಡಗುಗಳೆಂಬುದಾಗಿ ಗುರುತಿಸಲಾಗಿದೆ. ತಲಾ 30ರವರೆಗೆ ಸಿಬ್ಬಂದಿ ಹೊಂದಿದ್ದ ಹಡಗುಗಳು ಕಲ್ಲಿದ್ದಲ್ಲನ್ನು ಒಯ್ಯುತ್ತಿದ್ದವು ಎಂದು ಗೊತ್ತಾಗಿದೆ.
2014 ಮಾರ್ಚ್ 8ರಂದು ರಾತ್ರಿ ಮಲೇಶ್ಯ ರಾಜಧಾನಿ ಕೌಲಾಲಂಪುರದಿಂದ ಚೀನಾ ರಾಜಧಾನಿ ಬೀಜಿಂಗ್‌ಗೆ 239 ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ವಿಮಾನವು ನಿಗೂಢವಾಗಿ ನಾಪತ್ತೆಯಾಗಿತ್ತು.
ವಾಯುಯಾನ ಇತಿಹಾಸದಲ್ಲೇ ಬೃಹತ್ ಶೋಧ ಕಾರ್ಯಾಚರಣೆ ನಡೆಯಿತಾದರೂ, ಅವಶೇಷಗಳು ಪತ್ತೆಯಾಗಲಿಲ್ಲ. ಅಂತಿಮವಾಗಿ ಶೋಧ ಕಾರ್ಯಾಚರಣೆಯನ್ನು ಜನವರಿಯಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಜನವರಿ ಕೊನೆಯಿಂದ ಇನ್ನೊಂದು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಮೊದಲ ಶೋಧದ ಅವಧಿಯಲ್ಲಿ ಎರಡು ಹಡಗುಗಳ ಅವಶೇಷಗಳು ಪತ್ತೆಯಾಗಿವೆ. ಅವುಗಳ ಪೈಕಿ ಒಂದು 3,900 ಮೀಟರ್ ಆಳದಲ್ಲಿ ಅವಿತು ಕುಳಿತಿತ್ತು.
‘‘ಎರಡೂ ಹಡಗುಗಳು 19ನೆ ಶತಮಾನದ ವಾಣಿಜ್ಯ ಹಡಗುಗಳಾಗಿದ್ದವು. ಒಂದು ಮರದ ಹಡಗಾಗಿದ್ದರೆ, ಇನ್ನೊಂದು ಕಬ್ಬಿಣದ ಹಡಗಾಗಿತ್ತು. ಎರಡೂ ಹಡಗುಗಳು ಕಲ್ಲಿದ್ದಲು ಒಯ್ಯುತ್ತಿದ್ದವು’’ ಎಂದು ವೆಸ್ಟರ್ನ್ ಆಸ್ಟ್ರೇಲಿಯನ್ ಮ್ಯೂಸಿಯಂನ ಕ್ಯುರೇಟರ್ ರಾಸ್ ಆ್ಯಂಡರ್‌ಸನ್ ಹೇಳಿದ್ದಾರೆ.
ನಿಖರವಾಗಿ ಗುರುತಿಸುವುದು ಕಷ್ಟ
ಪತ್ತೆಯಾದ ಅವಶೇಷಗಳು ಯಾವ ಹಡಗುಗಳಿಗೆ ಸೇರಿದ್ದು ಎನ್ನುವುದನ್ನು ನಿಖರವಾಗಿ ಹೇಳುವುದು ಕಷ್ಟ. ಬ್ರಿಟಿಶ್ ಶಿಪ್ಪಿಂಗ್ ಮೂಲಗಳ ಮಾಹಿತಿಯ ಪ್ರಕಾರ, ಮರದ ಹಡಗು ‘ಡಬ್ಲು. ಗೋರ್ಡನ್’ ಆಗಿರಬಹುದು. ಅದು 1876ರಲ್ಲಿ ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೊದಿಂದ ಅಡಿಲೇಡ್‌ಗೆ ಪ್ರಯಾಣಿಸುತ್ತಿದ್ದಾಗ ನಾಪತ್ತೆಯಾಗಿತ್ತು. ಅಥವಾ ವೇಲ್ಸ್‌ನ ಪೆನರ್ತ್‌ನಿಂದ ಇಂಡೋನೇಶ್ಯದ ಟರ್ನೇಟ್‌ಗೆ ಹೋಗುತ್ತಿದ್ದ ‘ಮ್ಯಾಗ್ಡಲ’ ಹಡಗು ಆಗಿರಬಹುದು ಎಂದು ರಾಸ್ ಆ್ಯಂಡರ್‌ಸನ್ ಹೇಳುತ್ತಾರೆ.
‘‘ಕಬ್ಬಿಣದ ಹಡಗಿನ ಬಗ್ಗೆ ಹೇಳುವುದಾದರೆ, ಅದು 1894ರ ಬಾರ್ಕ್ಸ್ ಕೂರಿಂಗ, 1897ರ ಲೇಕ್ ಒಂಟಾರಿಯೊ ಅಥವಾ 1883ರ ವೆಸ್ಟ್ ರಿಜ್ ಆಗಿರಬಹುದು. ಅವಶೇಷಗಳಿಗೆ ವೆಸ್ಟ್ ರಿಜ್ ಹೆಚ್ಚು ಹೊಂದಾಣಿಕೆಯಾಗುತ್ತದೆ’’ ಎಂದು ಆ್ಯಂಡರ್‌ಸನ್ ತಿಳಿಸಿದರು.