ಕಾಂಗ್ರೆಸ್‌ನಲ್ಲಿ ಮಾತ್ರ ಜನರಿಗೆ ಭರವಸೆ-ವಿಷ್ಣುನಾಥ್
ಪುತ್ತೂರು, ಮೇ 3: ಕಳೆದ ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿ ನಾಯಕರು ಹಲವು ಭರವಸೆ ನೀಡಿದ್ದರು. ಅದರಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದು ಸೇರಿದಂತೆ ಹಲವು ಯೋಜನೆಗಳ ಬಗ್ಗೆಯೂ ಭರವಸೆ ನೀಡಿದ್ದರು. ಇದ್ಯಾವುದೂ ಜಾರಿಗೆ ಬಂದಿಲ್ಲ. ಆದ್ದರಿಂದ ಈಗ ಬಿಜೆಪಿ ನಾಯಕರ ಭರವಸೆಗಳನ್ನು ಜನರು ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಜನರು ಕಾಂಗ್ರೆಸ್‌ನ್ನು ನಂಬುತ್ತಾರೆ. ಪ್ರತಿ ಮನೆಗಳಿಗೆ ಮತ್ತೆ ಮತ್ತೆ ತೆರಳಿ ಮತ ಕೇಳಿ ಎಂದು ಕೆಪಿಸಿಸಿ ಉಸ್ತುವಾರಿ ವಿಷ್ಣುನಾಥನ್ ಹೇಳಿದರು.
ನೆಲ್ಲಿಕಟ್ಟೆ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಸ್ಕೂಟಿ ಹಾಗೂ ಸ್ಮಾರ್ಟ್ ಫೋನ್ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಇದನ್ನು ಮುಂದೆ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಸರಕಾರ ಈಡೇರಿಸುತ್ತದೆ. ಒಂದು ಗ್ರಾಮದಲ್ಲಿ 400 ಮನೆಗಳಿದ್ದರೆ, ಅಲ್ಲಿಗೆ ಆಯಾ ಗ್ರಾಮದ ಪಕ್ಷ ಮುಖಂಡರು ತೆರಳಿ ಮತ ಯಾಚನೆ ಮಾಡಬೇಕು ಎಂದರು.
ಬಿಜೆಪಿಯಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಣಗಳ ಮೇಲಾಟವೇ ಜಾಸ್ತಿಯಾಗಿದೆ. ಇಂತಹ ಪರಿಸ್ಥಿತಿಯ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಬೇಕು. ಪ್ರಸ್ತುತ ಜಿಲ್ಲೆಯ ಎಲ್ಲಾ ಕಾಂಗ್ರೇಸಿಗರು ಒಂದಾಗಿದ್ದಾರೆ. ಜನತೆಯೂ ಕಾಂಗ್ರೇಸ್ ಪರ ಒಲವು ಹೊಂದಿದ್ದಾರೆ ಎಂದು ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.
ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಟಿ. ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ವೆಂಕಟೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಅಮಲ ರಾಮಚಂದ್ರ, ಚುನಾವಣಾ ಪುತ್ತೂರು ಉಸ್ತುವಾರಿ ಎಂ.ಬಿ. ವಿಶ್ವನಾಥ ರೈ ಮೊದಲಾದವರು ಉಪಸ್ಥಿತರಿದ್ದರು.