29 ಲಕ್ಷ ಮಹಿಳೆಯರು, ಮಕ್ಕಳಿಗೆ ತೀವ್ರ ಅಪೌಷ್ಟಿಕತೆ

Update: 2018-05-03 16:40 GMT
ಸಾಂದರ್ಭಿಕ ಚಿತ್ರ

ಏಡನ್, ಮೇ 3: ಸಂಘರ್ಷಪೀಡಿತ ಯಮನ್‌ನಲ್ಲಿ ಸುಮಾರು 29 ಲಕ್ಷ ಮಹಿಳೆಯರು ಮತ್ತು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇನ್ನೂ 4 ಲಕ್ಷ ಮಕ್ಕಳು ಬದುಕುವುದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ‘ಅಸೋಸಿಯೇಟಡ್ ಪ್ರೆಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯಮನ್‌ನ 2.9 ಕೋಟಿ ಜನಸಂಖ್ಯೆಯ ಪೈಕಿ ಮೂರನೆ ಒಂದು ಭಾಗ, ಅಂದರೆ 84 ಲಕ್ಷ ಮಂದಿ ತಮ್ಮ ಆಹಾರಕ್ಕಾಗಿ ಆಹಾರ ನೆರವು ಕಾರ್ಯಕ್ರಮವನ್ನೇ ಅವಲಂಬಿಸಿದ್ದಾರೆ. ಅದು ಲಭಿಸದಿದ್ದರೆ ಅವರು ಹಸಿದಿರಬೇಕಾಗುತ್ತದೆ. ಈ ಸಂಖ್ಯೆ ಕಳೆದ ವರ್ಷದಲ್ಲಿ ನಾಲ್ಕನೇ ಒಂದರಷ್ಟು ಹೆಚ್ಚಾಗಿದೆ.

ಇಲ್ಲಿನ ಮಹಿಳೆಯರಿಗೆ ತಮ್ಮ ಮಕ್ಕಳನ್ನು ಸಾಕುವುದೇ ದೊಡ್ಡ ಸಾಹಸವಾಗಿದೆ. ಇಲ್ಲಿನ ಮಹಿಳೆಯರ ಸರಾಸರಿ ತೂಕವು ಸಾಮಾನ್ಯಕ್ಕಿಂತ ಅರ್ಧದಷ್ಟಿದೆ. ಮಕ್ಕಳ ತೂಕವೂ ಇದೇ ಪ್ರಮಾಣದಲ್ಲಿದೆ. ಆಹಾರದ ತೀವ್ರ ಕೊರತೆಯುಂಟಾದರೆ ಇಲ್ಲಿನ ತಾಯಂದಿರು ತಮ್ಮ ಪಾಲಿನ ಆಹಾರವನ್ನೂ ಮಕ್ಕಳಿಗೆ ನೀಡುತ್ತಾರೆ ಹಾಗೂ ತಾವು ಹಸಿದಿರುತ್ತಾರೆ.

ಬರಗಾಲದಿಂದಾಗಿ ಸಾವು: ನೆರವು ಸಂಸ್ಥೆಗಳ ಎಚ್ಚರಿಕೆ

ಬರಗಾಲದಿಂದಾಗಿ ಯಮನ್‌ನ ಒಂದು ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಸಾವುಗಳು ಸಂಭವಿಸಲಿವೆ ಎಂದು ನೆರವು ಸಂಸ್ಥೆಗಳು ಎಚ್ಚರಿಸಿವೆ.

ಹೆಚ್ಚು ಹೆಚ್ಚು ಜನರು ಬಾಹ್ಯ ನೆರವನ್ನೇ ಅವಲಂಬಿಸುತ್ತಿದ್ದಾರೆ ಹಾಗೂ ನೆರವು ಈಗಾಗಲೇ ಕಣ್ಣಾಮುಚ್ಚಾಲೆಯಾಡುತ್ತಿದೆ.

ದೇಶದ ಉತ್ತರ ಭಾಗವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಇರಾನ್ ಬೆಂಬಲಿತ ಶಿಯಾ ಹೌದಿ ಬಂಡುಕೋರರು ಮತ್ತು ಸೌದಿ ಅರೇಬಿಯ ನೇತೃತ್ವದ ಮಿತ್ರ ಪಡೆಗಳ ವಿರುದ್ಧ ನಡೆಯುತ್ತಿರುವ ಸಮರ ಈಗ ಮೂರನೇ ವರ್ಷದಲ್ಲಿದೆ. ಸೌದಿ ಮಿತ್ರ ಪಡೆಗೆ ಅಮೆರಿಕ ಶಸ್ತ್ರಗಳು ಮತ್ತು ಬೆಂಬಲ ನೀಡುತ್ತಿದೆ.

50,000 ಮಕ್ಕಳು ಹಸಿವೆಯಿಂದ ಸಾವು

ಆಂತರಿಕ ಸಂಘರ್ಷದಲ್ಲಿ ಎಷ್ಟು ಮಂದಿ ಸತ್ತಿದ್ದಾರೆ ಎನ್ನುವುದು ನಿಖರವಾಗಿ ಗೊತ್ತಿಲ್ಲ. ಆದರೆ, 2017ರಲ್ಲಿ ಹಸಿವೆ ಅಥವಾ ಕಾಯಿಲೆಯಿಂದಾಗಿ 50,000 ಮಕ್ಕಳು ಮೃತಪಟ್ಟಿದ್ದಾರೆ ಎಂದು ‘ಸೇವ್ ದ ಚಿಲ್ಡ್ರನ್’ ಅಂದಾಜಿಸಿದೆ.

ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಸುಮಾರು 30 ಶೇಕಡ ಮಕ್ಕಳು ಸಾಯುತ್ತಾರೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News