ಎಸ್ಸಿ/ಎಸ್ಟಿ ಕಾನೂನು: ಕೇಂದ್ರದ ಮನವಿಯನ್ನು ತಳ್ಳಿ ಹಾಕಿದ ಸರ್ವೋಚ್ಚ ನ್ಯಾಯಾಲಯ
ಹೊಸದಿಲ್ಲಿ, ಮೇ.3: ಎಸ್ಸಿ/ಎಸ್ಟಿ ಕಾನೂನಿನ ಬಗ್ಗೆ ನೀಡಿರುವ ಆದೇಶಕ್ಕೆ ತಡೆ ನೀಡುವಂತೆ ಕೋರಿ ಕೇಂದ್ರ ಸರಕಾರ ಮಾಡಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಗುರುವಾರ ತಳ್ಳಿ ಹಾಕಿದೆ. ಜೊತೆಗೆ, ಈ ಆದೇಶವು ಸಮುದಾಯದ ಜನರ ಹಕ್ಕುಗಳ ರಕ್ಷಣೆ ಮತ್ತು ಅವರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕ್ರಮ ಜರಗಿಸಲು ಶೇ. ನೂರು ಬೆಂಬಲ ನೀಡುತ್ತದೆ ಎಂದು ತಿಳಿಸಿದೆ.
ಮಾರ್ಚ್ 20ರಂದು ನೀಡಿದ ತೀರ್ಪಿನಿಂದಾಗಿ ಹಿಂಸಾಚಾರ ಭುಗಿಲೆದ್ದು, ಜೀವಹಾನಿ ಸಂಭವಿಸಿದೆ ಎಂಬ ಕೇಂದ್ರದ ವಾದವನ್ನು ಶ್ರೇಷ್ಟ ನ್ಯಾಯಾಲಯ ತಿರಸ್ಕರಿಸಿದೆ. ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಯನ್ನು ತಕ್ಷಣ ಬಂಧಿಸುವುದರ ಮೇಲೆ ನಿಬಂಧನೆಗಳನ್ನು ವಿಧಿಸಲಾಗಿರುವ ಮಾರ್ಚ್ 20ರ ತೀರ್ಪು ಶಾಸಕಾಂಗವು ಪ್ರತಿಪಾದಿಸಿರುವ ಕಾನೂನಿನ ವಿರುದ್ಧವಾಗಿದೆ. ಹಾಗಾಗಿ ಈ ತೀರ್ಪಿಗೆ ತಡೆಯನ್ನು ವಿಧಿಸಬೇಕು ಮತ್ತು ವಿಸ್ತಾರ ಪೀಠಕ್ಕೆ ಪ್ರಕರಣವನ್ನು ಒಪ್ಪಿಸಬೇಕು ಎಂದು ಕೇಂದ್ರವು ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ತಳ್ಳಿ ಹಾಕಿದ ನ್ಯಾಯಾಧೀಶ ಆದರ್ಶ್ ಗೋಯಲ್ ಮತ್ತು ಯು.ಯು ಲಲಿತ್ ಅವರ ಪೀಠ, ಈ ತೀರ್ಪನ್ನು ನೀಡುವುದಕ್ಕೂ ಮೊದಲು ಸರ್ವೋಚ್ಚ ನ್ಯಾಯಾಲಯದ ಹಿಂದಿನ ಆದೇಶಗಳು ಮತ್ತು ಇತರ ಹಲವು ಆಯಾಮಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದೆ.
ಈ ಆದೇಶದಲ್ಲಿ ಎಲ್ಲಿಯೂ ಪ್ರಕರಣ ದಾಖಲಿಸಬಾರದು ಎಂದು ತಿಳಿಸಿಲ್ಲ. ಆರೋಪಿಯನ್ನು ಬಂಧಿಸಬಾರದು ಎಂದೂ ತಿಳಿಸಿಲ್ಲ. ಇದು ಕೇವಲ ಆರೋಪಿಯನ್ನು ಕೂಡಲೇ ಬಂಧಿಸಬಾರದು ಎಂದು ಹೇಳಿದೆಯಷ್ಟೇ. ಎಸ್ಸಿ/ಎಸ್ಟಿ ಕಾಯ್ದೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಅವಕಾಶವಿಲ್ಲದಿರುವುದರಿಂದ ಮುಗ್ಧರಿಗೆ ಶಿಕ್ಷೆಯಾಗಬಾರದು ಎಂಬುದಷ್ಟೇ ನಮ್ಮ ಕಾಳಜಿ ಎಂದು ಪೀಠ ತಿಳಿಸಿದೆ. ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆ, 1989ರ ಪ್ರಕಾರ, ಆರೋಪಿಗೆ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ. ಆದರೆ ಆತನ ಬಂಧನದ ನಂತರ ಆತ ಜಾಮೀನು ಪಡೆಯಬಹುದು. ಅಪರಾಧ ಸಾಬೀತಾದರೂ ಕೇವಲ ಆರು ತಿಂಗಳ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ ಎಂದು ಪೀಠ ತಿಳಿಸಿದೆ.
ಕೇಂದ್ರದ ಪರ ವಾದಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ನ್ಯಾಯಾಲಯವು ಕಾನೂನಿನಲ್ಲಿರುವ ಲೋಪಗಳನ್ನು ಸರಿಪಡಿಸಬಹುದಷ್ಟೇ ಹೊರತು ಹೊಸ ಕಾನೂನುಗಳನ್ನು ರೂಪಿಸುವಂತಿಲ್ಲ ಎಂದು ಅಭಿಪ್ರಾಯಿಸಿದರು. ಇದಕ್ಕೆ ಉತ್ತರಿಸಿದ ಪೀಠವು, ಶ್ರೇಷ್ಟ ನ್ಯಾಯಾಲಯವು ಎಸ್ಸಿ/ಎಸ್ಟಿ ಕಾನೂನಿನಲ್ಲಿ ಒಂದೇ ಒಂದು ಶಬ್ದವನ್ನು ಕೂಡಾ ಬದಲಾಯಿಸಿಲ್ಲ ಅಥವಾ ಹೊಸತಾಗಿ ಸೇರಿಸಿಲ್ಲ. ಅದು ಕೇವಲ ಈಗಾಗಲೇ ಇರುವ ಕಾನೂನನ್ನು ಸರಿಯಾಗಿ ಅನುಷ್ಟಾನಕ್ಕೆ ತಂದಿದೆ ಎಂದು ತಿಳಿಸಿದೆ. ಇಷ್ಟೆಲ್ಲವನ್ನು ಮಾಡಿರುವು ಸಾರ್ವಜನಿಕ ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಹೊರಿಸಿ ಬಲಿಪಶು ಮಾಡುವುದನ್ನು ತಪ್ಪಿಸುವುದಕ್ಕಾಗಿ ಎಂದು ನ್ಯಾಯಾಲಯ ಪೀಠವು ತಿಳಿಸದೆ. ಈ ಕುರಿತು ಮುಂದಿನ ವಿಚಾರಣೆ ಮೇ. 16ರಂದು ನಡೆಯಲಿದೆ.