×
Ad

ಮಾರ್ಗಸೂಚಿಗಳ ಉಲ್ಲಂಘನೆ: ಆಧಾರ್ ಕೇಂದ್ರಗಳಿಗೆ 1ಲ.ರೂ.ದಂಡದ ಎಚ್ಚರಿಕೆ

Update: 2018-05-03 22:21 IST

 ಹೊಸದಿಲ್ಲಿ,ಮೇ.3:ಆಧಾರ್ ಕಾರ್ಡ್ ನೀಡಿಕೆಯಲ್ಲಿ ಕಟ್ಟುನಿಟ್ಟಿನ ನೋಂದಣಿ ಮತ್ತು ಅಪ್‌ಡೇಟ್ ಪ್ರಕ್ರಿಯೆಯನ್ನು ತಾನು ಅನುಸರಿಸುತ್ತಿರುವುದಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಗುರುವಾರ ಹೇಳಿದೆ. ತನ್ನ ಆಧಾರ್ ದಾಖಲಾತಿ ಸಾಫ್ಟ್‌ವೇರ್‌ನಲ್ಲಿ ಸೋರಿಕೆಯ ವರದಿಗಳ ನಡುವೆಯೇ ಅದು ವಿವಿಧ ಉಲ್ಲಂಘನೆಗಳಿಗಾಗಿ 50,000ಕ್ಕೂ ಅಧಿಕ ಆಧಾರ್ ದಾಖಲಾತಿ ಕೇಂದ್ರಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಉಲ್ಲಂಘನೆಯ ಪ್ರತಿ ಪ್ರಕರಣಕ್ಕೆ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸುವುದಾಗಿ ಅದು ಎಚ್ಚರಿಕೆ ನೀಡಿದೆ.

ಸೋರಿಕೆ ವರದಿಗಳನ್ನು ‘ನಿರಾಧಾರ ಮತ್ತು ಸುಳ್ಳು’ ಎಂದು ತಳ್ಳಿಹಾಕಿರುವ ಪ್ರಾಧಿಕಾರವು ತನ್ನ ದಾಖಲಾತಿ ಸಾಫ್ಟ್ ವೇರ್ ಯಾವುದೇ ದುರ್ಬಳಕೆಯನ್ನು ತಡೆಯುವ ಅಗತ್ಯ ಸುರಕ್ಷತಾ ಕ್ರಮಗಳನ್ನು ಹೊಂದಿದೆ ಎಂದು ತಿಳಿಸಿದೆ.

ಆಧಾರ್ ದಾಖಲಾತಿ ಸಾಫ್ಟ್‌ವೇರ್‌ನ್ನು ದುರ್ಬಳಕೆ ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಮತ್ತು ಇದು ಯಾವುದೇ ದಾಖಲೆಗಳಿಲ್ಲದೆ ಆಧಾರ್ ನೀಡಿಕೆಯನ್ನು ಸಾಧ್ಯವಾಗಿಸುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಾಧಿಕಾರದ ಈ ಹೇಳಿಕೆ ಹೊರಬಿದ್ದಿದೆ.

ಆಧಾರ್ ನೋಂದಣಿ ಕೇಂದ್ರದಲ್ಲಿ ವ್ಯಕ್ತಿಯು ನೀಡುವ ಬಯೊಮೆಟ್ರಿಕ್ ವಿವರಗಳನ್ನು ಎಲ್ಲ ಆಧಾರ್ ಕಾರ್ಡ್ ಹೊಂದಿರುವವರ ವಿವರಗಳೊಂದಿಗೆ ತಾಳೆ ಹಾಕಿದ ಬಳಿಕವೇ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News