ಬೈಕ್‌ಗಳಿಗೆ ಪೆಟ್ರೋಲ್ ತುಂಬಿಸಿ ಮತದಾರರಿಗೆ ಆಮಿಷ ಆರೋಪ: ಮಟ್ಟಾರು, ಸತೀಶ್ ಅಮೀನ್ ವಿರುದ್ಧ ಪ್ರಕರಣ ದಾಖಲು
ಉಡುಪಿ, ಮೇ 3: ಬೈಕ್ ಹಾಗೂ ಸ್ಕೂಟರ್‌ಗಳಿಗೆ ಉಚಿತವಾಗಿ ಪೆಟ್ರೋಲ್ ತುಂಬಿಸಿ ಮತದಾರರಿಗೆ ಆಮಿಷವೊಡ್ಡಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಹಾಗೂ ಪೆಟ್ರೋಲ್ ಪಂಪ್‌ಗಳ ಮಾಲಕರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಗುರುವಾರ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಪೆಟ್ರೋಲ್ ತುಂಬಿಸಿದ ಗುಂಡಿಬೈಲಿನ ಲಕ್ಷ್ ಎಂಟರ್‌ಪ್ರೈಸಸ್‌ನ (ಇಂಡಿಯನ್ ಆಯಿಲ್) ಮಾಲಕ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಮತ್ತು ಸಂತೆಕಟ್ಟೆಯ ಇಂದಿರಾ ಪೆಟ್ರೋಲ್ ಬಂಕ್ (ಇಂಡಿಯನ್ ಆಯಿಲ್), ಗುಂಡಿಬೈಲಿನ ಲಕ್ಷ್ ಎಂಟರ್‌ಪ್ರೈಸಸ್ (ಇಂಡಿಯನ್ ಆಯಿಲ್), ಗುಂಡಿಬೈಲಿನ ಭಾಗೀರಥಿ ಎಂಟರ್‌ಪ್ರೈಸಸ್ (ಎಚ್‌ಪಿ) ಹಾಗೂ ಇಂದ್ರಾಳಿಯ ರಾಜ ರಾಜೇಶ್ವರಿ ಎಂಟರ್‌ಪ್ರೈಸಸ್ (ಇಂಡಿಯನ್ ಆಯಿಲ್) ಇವುಗಳ ಮಾಲಕರ ಮೇಲೆ ಪ್ರಕರಣಗಳು ದಾಖಲಾಗಿವೆ.
ಕಾಂಗ್ರೆಸ್ ಚುನಾವಣಾ ಪ್ರಚಾರದ ಬಗ್ಗೆ ಬೈಕ್ ರ್ಯಾಲಿಗಾಗಿ ಸತೀಶ್ ಅಮೀನ್ ಪಡುಕೆರೆ ಅನುಮತಿ ಕೇಳಿದ್ದು, ಅವರಿಗೆ ನಂ.ಇಎಲ್‌ಎನ್ (ಎಂಸಿಸಿ)ಸಿಆರ್7/17-18 ನಡಿ ಎ. 15ರಂದು ಉಡುಪಿ ಚುನಾವಣಾಧಿಕಾರಿಗಳಿಂದ ಅನುಮತಿ ನೀಡಲಾಗಿತ್ತು. ಆದರೆ ಎ. 22 ರಂದು ಪಡುಕೆರೆ ನೇತೃತ್ವದಲ್ಲಿ ನಡೆದ ಬೈಕ್ ರ್ಯಾಲಿಯ ಸಂದರ್ಭದಲ್ಲಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರ ಮೋಟಾರು ಬೈಕ್, ಸ್ಕೂಟರ್‌ಗಳಿಗೆ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ಉಚಿತವಾಗಿ ಪೆಟ್ರೋಲ್ ತುಂಬಿಸಿದ್ದರು ಎಂದು ದೂರಲಾಗಿದೆ.
ಮೇ 1ರಂದು ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಸಮಾವೇಶಕ್ಕೆ ಮಟ್ಟಾರು ರತ್ನಾಕರ ಹೆಗ್ಡೆ ಅವರಿಗೆ ಅನುಮತಿ ನೀಡಿದ್ದು, ಇವರು ಕೂಡಾ ನೀತಿ ಸಂಹಿತೆ ಉಲ್ಲಂಘಿಸಿ ಬೈಕ್, ಸ್ಕೂಟರ್‌ಗಳಿಗೆ ಪೆಟ್ರೋಲ್ ಬಂಕ್‌ನಲ್ಲಿ ಉಚಿತವಾಗಿ ಪೆಟ್ರೋಲ್ ತುಂಬಿಸಿ ಮತದಾರರಿಗೆ ಆಮಿಷವೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಸಂಪೂರ್ಣ ವೀಡಿಯೊ ಚಿತ್ರೀಕರಣ ಮಾಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಇಬ್ಬರು ರಾಷ್ಟ್ರೀಯ ಪಕ್ಷದ ನಾಯಕರು ಹಾಗೂ ಬಂಕ್‌ಗಳ ಮಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.