ಅಮೆರಿಕದ ಸೇನಾ ಸರಕು ವಿಮಾನ ಪತನ: 9 ಸೈನಿಕರು ಸಾವು
Update: 2018-05-03 22:32 IST
ವಾಶಿಂಗ್ಟನ್, ಮೇ 3: ತನ್ನ ನಿಗದಿತ ಕೊನೆಯ ಹಾರಾಟದಲ್ಲಿ ತೊಡಗಿದ್ದ ಅಮೆರಿಕದ ಸೇನಾ ಸರಕು ವಿಮಾನವೊಂದು ಬುಧವಾರ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಸೈನಿಕರು ಮೃತಪಟ್ಟಿದ್ದಾರೆ.
ಪೋರ್ಟರಿಕೊ ಏರ್ ನ್ಯಾಶನಲ್ ಗಾರ್ಡ್‌ಗೆ ಸೇರಿದ ಸಿ-130 ಹರ್ಕ್ಯುಲಸ್ ಸರಕು ವಿಮಾನವು ಸವನ್ನಾ ವಿಮಾನ ನಿಲ್ದಾಣದ ಸಮೀಪ ಪತನಗೊಂಡಿದೆ.
ವಿಮಾನವು ಕೆಳಗೆ ಬೀಳುತ್ತಿರುವುದು ಹಾಗೂ ಅಂತಿಮವಾಗಿ ಸ್ಫೋಟಿಸಿ ಬೆಂಕಿಯುಂಡೆಯಾಗುವ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ಪ್ರಸಾರಿಸಿವೆ.
‘‘ಐವರು ಸಿಬ್ಬಂದಿ ಮತ್ತು ನಾಲ್ವರು ಹೆಚ್ಚುವರಿ ಪ್ರಯಾಣಿಕರು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ’’ ಎಂದು ಪೋರ್ಟರಿಕೊ ನ್ಯಾಶನಲ್ ಗಾರ್ಡ್ ವಕ್ತಾರ ಮೇಜರ್ ಪೌಲ್ ಡ್ಯಾಹ್ಲನ್ ತಿಳಿಸಿದರು.
ವಿಮಾನವು 50ಕ್ಕಿಂತಲೂ ಹೆಚ್ಚು ವರ್ಷ ಹಳೆಯದು ಎನ್ನಲಾಗಿದೆ. ಅದು ತನ್ನ ಕೊನೆಯ ಹಾರಾಟದಲ್ಲಿ ತೊಡಗಿದ್ದು, ಹಳೆಯ ವಿಮಾನಗಳನ್ನು ಇಡುವ ಸ್ಥಳಕ್ಕೆ ಹಾರುತ್ತಿತ್ತು.