×
Ad

ಸಂಸದೆ ಶೋಭಾರಿಂದ ಉಡುಪಿ ಕೃಷ್ಣನಿಗೆ ಅವಮಾನ: ಪ್ರಮೋದ್ ಮಧ್ವರಾಜ್

Update: 2018-05-03 22:33 IST

ಉಡುಪಿ, ಮೇ 3: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೇಶದ ಪ್ರಧಾನಿಗೆ ಭದ್ರತೆ ಇಲ್ಲ ಎಂದರೆ ಅದು ಶ್ರೀಕೃಷ್ಣನನ್ನೇ ಅವಮಾನಿಸಿದಂತೆ. ಇದು ಉಡುಪಿ ಜಿಲ್ಲೆಯ ಜನತೆಗೂ ಮಾಡಿದ ಅವಮಾನ ಎಂದ ಸಚಿವ ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ ಅವರು ಬುಧವಾರ ಬೆಂಗಳೂರಿನಲ್ಲಿ ನೀಡಿದ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಉಡುಪಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿದೆ. ಈ ಬಗ್ಗೆ ಹೆಮ್ಮೆ ಪಡುವುದನ್ನು ಬಿಟ್ಟು, ಪ್ರಧಾನಿಗೆ ಇಲ್ಲಿ ಜೀವ ಬೆದರಿಕೆ ಇದೆ ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಶ್ರೀಕೃಷ್ಣನಷ್ಟು ಶಕ್ತಿಶಾಲಿ ದೇವರು ಯಾರಿದ್ದಾರೆ. ಕೃಷ್ಣನ ಆಶೀರ್ವಾದದಿಂದ ನನಗೆ ಮೂರು ಬಾರಿ ಭಡ್ತಿ ಸಿಕ್ಕಿತು. ಉಡುಪಿಯಲ್ಲಿ ಚುನಾವಣಾ ಪ್ರಚಾರಕ್ಕೆ ಬಂದ ಪ್ರಧಾನಿ ಸಮೀಪದಲ್ಲೇ ಇದ್ದ ಶ್ರೀಕೃಷ್ಣ ಮಠಕ್ಕೆ ಭೇಟಿಗೆ ಬಾರದಿರುವುದಕ್ಕೆ ಇಂಥ ಸಬೂಬು ನೀಡುವುದು ಸರಿಯಲ್ಲ ಎಂದರು.

ಈ ಮೊದಲು ಬಿಜೆಪಿಯವರು ಸಿದ್ಧರಾಮಯ್ಯ ಕೃಷ್ಣ ಮಠಕ್ಕೆ ಬಂದಿಲ್ಲ ಎಂದು ಬೊಬ್ಬೆ ಹಾಕುತಿದ್ದರು. ಆದರೆ ಪ್ರಧಾನಿ ಮಠಕ್ಕೆ ಭೇಟಿ ನೀಡುವುದಿಲ್ಲ ಎಂದು ಗೊತ್ತಾದ ಮೇಲೂ ಈ ರೀತಿಯ ನಾಟಕ ಮಾಡಿದ್ದು ಯಾಕೆ ?. ಪೂಜೆ ಸ್ಥಗಿತ ಮಾಡಿ ಭಕ್ತರನ್ನು ತಡೆದಿದ್ದು ಯಾಕೆ ? ಪ್ರಧಾನಿ ಮಠಕ್ಕೆ ಭೇಟಿ ನೀಡುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದೇಕೆ ಎಂದವರು ಪ್ರಶ್ನಿಸಿದರು.

ಶೋಭಾ ಕರಂದ್ಲಾಜೆ ಅವರು ಇಡೀ ರಾಜ್ಯವನ್ನು ಸುತ್ತುವುದರಿಂದ ತಮ್ಮ ಕ್ಷೇತ್ರ ಯಾವುದೆಂದು ಮರೆತಿರಬೇಕು ಎಂದು ಪ್ರಮೋದ್ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News