ಉಡುಪಿ: ಶಿವಸೇನಾ ಅಭ್ಯರ್ಥಿಯನ್ನು ಬೆಂಬಲಿಸಲು ಮನವಿ
ಉಡುಪಿ, ಮೇ 3: ಹಿಂದೂಗಳ ಸುರಕ್ಷತೆಗಾಗಿ ಡೋಂಗಿ ಹಿಂದುತ್ವವಾದಿಗಳನ್ನು ದೂರವಿಟ್ಟು ಈ ಬಾರಿ ಶಿವಸೇನಾ ಅಭ್ಯರ್ಥಿಗಳನ್ನು ಬೆಂಬಲಿಸಿ ಮತ ನೀಡುವಂತೆ ಶಿವಸೇನಾ ಕರಾವಳಿ ಕರ್ನಾಟಕದ ಅಧ್ಯಕ್ಷ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಿವಸೇನಾ ಅಭ್ಯರ್ಥಿ ಮಧುಕರ ಮುದ್ರಾಡಿ ಮತದಾರ ರಲ್ಲಿ ವಿನಂತಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ವಿವಿದೆಡೆಗಳಲ್ಲಿ ಈ ಬಾರಿ ಒಟ್ಟು 40 ಮಂದಿ ಶಿವಸೇನಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದರು. ಹಿಂದುತ್ವವನ್ನು ಕೇವಲ ಚುನಾವಣೆಗಾಗಿ ಬಳಸಿ ಬಳಿಕ ಹಿಂದೂಗಳನ್ನು ಕಡೆಗಣಿಸುವ ಬಿಜೆಪಿ ಇಂದು ಇನ್ನೊಂದು ಕಾಂಗ್ರೆಸ್ ಆಗಿ ಹೋಗಿದೆ ಎಂದರು.
ದೇಶದಲ್ಲಿ ಹಿಂದುತ್ವಕ್ಕಾಗಿ ಹೋರಾಡಿದ ಪ್ರವೀಣ್‌ಬಾಯ್ ತೊಗಾಡಿಯಾ, ಪ್ರಮೋದ್ ಮುತಾಲಿಕ್, ಎಲ್.ಕೆ. ಅಡ್ವಾಣಿ ಅವರು ಮಾಡಿದ ತಪ್ಪಾದರೂ ಏನು ಎಂದು ಪ್ರಶ್ನಿಸಿದರು. ಉಡುಪಿ ಕ್ಷೇತ್ರದಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳು ಕಳಂಕಿತರಿಗೆ ಟಿಕೆಟ್ ನೀಡಿವೆ. ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಎರಡು ಸಲ ನಿಂತು ಗೆದ್ದಾಗಲೂ ಶಾಸಕರಾಗಿ ಉಡುಪಿಯ ಘನತೆಯನ್ನು ಹಾಳು ಮಾಡಿದ್ದಾರೆ. ಕ್ಷೇತ್ರದ ಹೆಸರಿಗೆ ಕಳಂಕ ತಂದಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಇತ್ತೀಚೆಗೆ ಅವ್ಯವಹಾರದ ಆರೋಪ ಮಾಡಲಾಗಿದೆ ಎಂದು ಮಧುಕರ ಮುದ್ರಾಡಿ ತಿಳಿಸಿದರು.
ಉಡುಪಿಯಲ್ಲಿ ತನ್ನ ಸ್ಪರ್ಧೆಗೆ ಶ್ರೀರಾಮಸೇನೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಶೀಘ್ರವೇ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಶ್ರೀಸಿದ್ಧಲಿಂಗ ಸ್ವಾಮೀಜಿ ತನ್ನ ಪರವಾಗಿ ಪ್ರಚಾರಕ್ಕೆ ಬರಲಿದ್ದಾರೆ. ಕ್ಷೇತ್ರದ ಯುವ ಮತದಾರರ ಒಲವು ತಮ್ಮ ಪರವಾಗಿ ಇದೆ ಎಂದು ಮಧುಕರ ಮುದ್ರಾಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಆನಂದ ಶೆಟ್ಟಿ, ಜಿಲ್ಲಾಧ್ಯಕ್ಷ ಗೌತಮ್ ಪ್ರಭು, ರಾಮಸೇನೆಯ ಜಿಲ್ಲಾಧ್ಯಕ್ಷ ದಿನೇಶ್ ಪಾಂಗಾಳ, ಶಿವಸೇನೆ ವಕ್ತಾರ ಜಯರಾಮ ಎ.ಉಪಸ್ಥಿತರಿದ್ದರು.