×
Ad

ಪ್ರಕಾಶ್ ರೈ ಬಗ್ಗೆ ಹುಚ್ಚ ವೆಂಕಟ್ ಹೇಳಿದ್ದೇನು ಗೊತ್ತಾ ?

Update: 2018-05-04 19:34 IST

ಮಂಗಳೂರು, ಮೇ 4: ನಟನಾಗಿರುವ ಪ್ರಕಾಶ್ ರೈ ಸಿನೆಮಾಗಳಲ್ಲಿ ಡಯಲಾಗ್ ಹೊಡೆದಂತೆ ವೇದಿಕೆಗಳಲ್ಲಿ ಡಯಲಾಗ್ ಬಿಡುತ್ತಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದು ಹುಚ್ಚ ವೆಂಕಟ್ ಟೀಕಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಾನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಕುರಿತಂತೆ ಮಾತನಾಡುತ್ತಾ, ಪ್ರಕಾಶ್ ರೈ ವಿರುದ್ಧ ಕಿಡಿ ಕಾರಿದರು.

ಪ್ರಕಾಶ್ ರೈ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಹುಚ್ಚ ವೆಂಕಟ್, ‘ನೀನು ಸಮಾಜಕ್ಕೆ, ಜನತೆಗೆ ಏನು ಮಾಡಿದ್ದೀಯಾ?’ ಎಂದು ಪ್ರಶ್ನಿಸಿದರಲ್ಲದೆ, ಮೋದಿ ಏನು ಮಾಡಿದ್ದಾರೆಂಬುದು ಇಡೀ ಜಗತ್ತಿಗೆ ತಿಳಿದಿದೆ ಎಂದರು. ‘ಸಿನೆಮಾದಲ್ಲಿ ಬೆಲೆ ನೀಡುವುದು ಕೇವಲ ಎಂಟರ್‌ಟೇನ್‌ಮೆಂಟ್‌ಗೆ ಅಷ್ಟೇ. ಸಿನೆಮಾ ಮುಗಿದ ಮೇಲೆ ಏನೂ ಬೆಲೆ ಇಲ್ಲ’ ಎಂದು ಪ್ರಕಾಶ್ ರೈಯವರನ್ನು ಮೂದಲಿಸಿದ ಹುಚ್ಚ ವೆಂಕಟ್, ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದರು.

ಮೋದಿ ವಿರುದ್ಧ ಟೀಕೆ ಮಾಡಿದರೆ ವ್ಯಾಲ್ಯೂ ಹೆಚ್ಚಾಗುತ್ತದೆ. ಸಿನೆಮಾ ನಟನೆಗೆ ಡಿಮ್ಯಾಂಡ್ ಹೆಚ್ಚಾಗುತ್ತದೆ, ಬೇಡಿಕೆ ಬರುತ್ತದೆ ಎಂಬ ಕಾರಣಕ್ಕೆ ಪ್ರಕಾಶ್ ರೈ ಮೋದಿ ವಿರುದ್ಧ ಮಾತನಾಡುತ್ತಾರೆ ಎಂದು ಹೇಳಿದ ಅವರು, ಮೋದಿ ವಿರುದ್ಧ ಮಾತನಾಡುವ ಯೋಗ್ಯತೆ ಪ್ರಕಾಶ್ ರೈಗಿಲ್ಲ ಎಂದರು.

ಚಪ್ಪಲಿ ಚಿಹ್ನೆಯ ಮೂಲಕ ರಾಜರಾಜೇಶ್ವರಿ ನಗರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಜನತೆ ಬೆಂಬಲಿಸುವ ವಿಶ್ವಾಸವಿದೆ ಎಂದರು.
ಹೆಣ್ಮಕ್ಕಳ ರಕ್ಷಣೆಗಾಗಿ ತನ್ನ ಸ್ಪರ್ಧೆ. ಅದಕ್ಕಾಗಿ ಹೆಣ್ಮಕ್ಕಳ ಚಪ್ಪಲಿಯನ್ನೇ ಚಿಹ್ನೆಯಾಗಿ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೆ. ಆದರೆ ಪುರುಷರ ಚಪ್ಪಲಿ ಚಿಹ್ನೆ ದೊರೆತಿದೆ. ಅದು ತನ್ನ ತಂದೆಯ ಪಾದರಕ್ಷೆ ಎಂದೇ ಭಾವಿಸಿ ಚುನಾವಣೆ ಎದುರಿಸುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ನನ್ನ ಮುಖ್ಯ ಉದ್ದೇಶ, ನಂಬಿಕೆ, ಪ್ರೀತಿ ಇದ್ದರೆ ಓಟು ಮಾಡಿ. ನಾನು ಕುಕ್ಕರ್, 500 ಅಥವಾ 2 ಸಾವಿರ ಹಣ ಕೊಡಲ್ಲ. ಜನತೆ ಕೂಡ ತಮ್ಮ ಮತ ವನ್ನು ಹಣಕ್ಕಾಗಿ ಮಾರಾಟ ಮಾಡಬಾರದು ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News