7 ದಿನಗಳಲ್ಲಿ ಶೌಚಾಲಯ ಕಟ್ಟಿದ 87ರ ವೃದ್ಧೆ
ಶ್ರೀನಗರ, ಮೇ.4: ಜಮ್ಮು ಮತ್ತು ಕಾಶ್ಮೀರದ ಬಡಾಲಿ ಗ್ರಾಮದ ಉಧಮ್‌ಪುರ್‌ನ ಜನರು ಹಲವು ದಶಕಗಳಿಂದ ಶೌಚಕ್ಕಾಗಿ ಬಯಲು ಪ್ರದೇಶವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಸ್ವಚ್ಛ ಭಾರತ ಅಭಿಯಾನದಡಿ ಈ ಗ್ರಾಮದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಿಂದ ಪ್ರೇರಿತರಾದ 87ರ ಹರೆಯದ ವೃದ್ಧೆಯೊಬ್ಬರು ತನ್ನ ಊರಿನಲ್ಲಿ ಶೌಚಾಲಯವನ್ನು ನಿರ್ಮಿಸುವ ಮೂಲಕ ಇಡೀ ದೇಶಕ್ಕೇ ಮಾದರಿಯಾಗಿದ್ದಾರೆ.
ಉಧಮ್‌ಪುರ ನಿವಾಸಿ ವೃದ್ಧೆ ರಾಖಿ ಬಡಮಹಿಳೆಯಾಗಿದ್ದು ಶೌಚಾಲಯ ನಿರ್ಮಿಸಲು ಕಾರ್ಮಿಕರಿಗೆ ನೀಡಲು ಆಕೆಯ ಬಳಿ ಹಣವಿರಲಿಲ್ಲ. ಆದರೂ ಛಲ ಬಿಡದ ವೃದ್ಧೆ ತಾನಾಗಿಯೇ ಶೌಚಾಲಯವನ್ನು ನಿರ್ಮಿಸಿದ್ದಾರೆ. "ನನಗೆ ನನ್ನ ಗ್ರಾಮವನ್ನು ಬಯಲುಶೌಚಾಲಯ ಮುಕ್ತಗೊಳಿಸಬೇಕೆಂಬ ಆಸೆ. ಗ್ರಾಮದಲ್ಲಿ ನಡೆದ ಜಾಗೃತಿ ಅಭಿಯಾನಗಳಿಂದ ನನಗೆ ಸ್ಫೂರ್ತಿ ದೊರೆಯಿತು ಎಂದು ಉತ್ಸಾಹದಿಂದಲೇ ತಿಳಿಸುತ್ತಾರೆ ರಾಖಿ". ನನ್ನ ಮಗ ಶೌಚಾಲಯ ನಿರ್ಮಾಣಕ್ಕಾಗಿ ಮಣ್ಣನ್ನು ಹದಗೊಳಿಸಿದ. ನಂತರ ನಾನೇ ಮೇಸ್ತ್ರಿಯ ಕೆಲಸವನ್ನು ಮಾಡಿದೆ. ಏಳು ದಿನಗಳಲ್ಲಿ ನಮ್ಮ ಶೌಚಾಲಯ ಸಿದ್ಧವಾಗಿತ್ತು ಎಂದು ತಿಳಿಸಿದ್ದಾರೆ. ಬಯಲು ಶೌಚಾಲಯ ಒಳ್ಳೆಯದಲ್ಲ. ಯಾಕೆಂದರೆ ಇದರಿಂದ ಅನೇಕ ರೋಗಗಳು ಹರಡುತ್ತವೆ ಎನ್ನುತ್ತಾರೆ 87ರ ವೃದ್ಧೆ.
ಆಕೆಯ ಕೆಲಸವನ್ನು ಶ್ಲಾಘಿಸಿರುವ ಉಧಮ್‌ಪುರದ ಸಹಾಯಕ ಆಯಕ್ತ, ಇದು ಜನರು ತಮ್ಮ ಹಳೆಯ ಮಾನಸಿಕತೆಯನ್ನು ತೊರೆಯಲು ಸಕಾಲವಾಗಿದೆ. 87ರ ಹರೆಯದ ವೃದ್ಧೆ ತನ್ನ ಸ್ವಂತ ಕೈಗಳಿಂದ ಶೌಚಾಲಯ ನಿರ್ಮಿಸಿದ ಸುದ್ದಿ ಕೇಳಿಯೇ ನನಗೆ ಆಶ್ಚರ್ಯವಾಯಿತು. ಆಕೆಯ ಉತ್ಸಾಹಕ್ಕೆ ನಾನು ಶಿರಭಾಗುತ್ತೇನೆ. ಎಲ್ಲರೂ ಆಕೆಯಿಂದ ಪಾಠ ಕಲಿಯಬೇಕಿದೆ ಎಂದು ತಿಳಿಸಿದ್ದಾರೆ.