×
Ad

ಅಭಿವೃದ್ಧಿ ಮುಂದುವರಿಕೆಗೆ ಜನತೆ ಅವಕಾಶ: ಪ್ರಮೋದ್ ವಿಶ್ವಾಸ

Update: 2018-05-04 20:47 IST

ಉಡುಪಿ, ಮೇ 4: ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿ ಸಚಿವನಾಗಿ 2026 ಕೋಟಿ ರೂ.ಗಳಿಗೂ ಮಿಕ್ಕಿ ಅನುದಾನವನ್ನು ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದೇನೆ. ಕಳೆದ 5 ವರ್ಷಗಳ ಅವಧಿಯಲ್ಲಿ 21,000 ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ, ತಾಂತ್ರಿಕ ಅಡಚಣೆಯನ್ನು ಹೊರತುಪಡಿಸಿ 24 ಗಂಟೆಗಳ ನಿರಂತರ ವಿದ್ಯುತ್ ದೊರೆಯುವಂತೆ ಮಾಡಿದ್ದೇನೆ ಎಂದು ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿರುವ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.

ಅವರು ಮೂಡುಬೆಟ್ಟು, ನಿಟ್ಟೂರು, ಪೆರಂಪಳ್ಳಿ ಹಾಗೂ ಇಂದಿರಾ ನಗರದ ವಿವಿಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡುತಿದ್ದರು. ಅಕ್ರಮ- ಸಕ್ರಮ ಯೋಜನೆಯಡಿಯಲ್ಲಿ ಹಕ್ಕು ಪತ್ರಗಳ ವಿತರಣೆ, ಹಳ್ಳಿಯ ಮೂಲೆ ಮೂಲೆಗಳಿಗೂ ಜೆ-ನರ್ಮ್ ಸರಕಾರಿ ಬಸ್‌ಗಳು, ಸಂಪರ್ಕ ಸೇತುವೆಗಳು ಪ್ರವಾಸ ತಾಣಗಳ ಅಭಿವೃದ್ಧಿ, ಬಂದರು ಅಭಿವೃದ್ಧಿ, ಸಮುದ್ರತೀರದಲ್ಲಿ ತಡೆಗೋಡೆ ನಿರ್ಮಾಣ, ಕ್ರೀಡಾಂಗಣ, ಬಡಕುಟುಂಬಗಳಿಗೆ ದಾನಿಗಳ ನೆರವಿನೊಂದಿಗೆ ಮನೆಗಳ ನಿರ್ಮಾಣ ಹೀಗೆ ಹತ್ತು ಹಲವು ಅಭಿವೃದ್ಧಿ ಕೆಲಸ ಗಳನ್ನು ಅನುಷ್ಠಾನಗೊಳಿಸಿ ಉಡುಪಿ ಕ್ಷೇತ್ರವನ್ನು ರಾಜ್ಯದಲ್ಲಿ ನಂ.1 ಕ್ಷೇತ್ರವನ್ನಾ ಗಿಸಿದ ಸಂತೃಪ್ತಿ ನನಗಿದೆ ಎಂದರು.

ಕ್ಷೇತ್ರದ ಜನರು ಮತ್ತೊಮ್ಮೆ ನನಗೆ ಮತದಾನ ಮಾಡುವುದರೊಂದಿಗೆ ಇನ್ನಷಟು ಸೇವೆಗೆ ಅವಕಾಶ ನೀಡಬೇಕು ಎಂದು ಪ್ರಮೋದ್ ಸಾರ್ವಜನಿಕ ಚುನಾವಾ ಪ್ರಚಾರ ಸಭೆಯಲ್ಲಿ ವಿನಂತಿಸಿದರು.

ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ ಮುನಿಯಾಲು, ಎಐಸಿಸಿ ಸದಸ್ಯ ಅಮೃತ್ ಶೆಣೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ನಗರಸಭಾ ಅಧ್ಯಕ್ಷೆ ಮೀನಾಕ್ಷೀ ಮಾಧವ ಬನ್ನಂಜೆ, ಪಕ್ಷದ ಮುಖಂಡರಾದ ದಿವಾಕರ ಕುಂದರ್, ಭಾಸ್ಕರ ರಾವ್ ಕಿದಿಯೂರು, ಕೀರ್ತಿ ಶೆಟ್ಟಿ, ಜನಾರ್ದನ ಭಂಡಾರ್ಕಾರ್, ಹಾರ್ಮಿಸ್ ನೊರೋನ್ಹ, ಯುವರಾಜ್, ಸಂಧ್ಯಾ ತಿಲಕ್ ರಾಜ್, ಪ್ರಶಾಂತ್ ಭಟ್, ಚಂದ್ರಿಕಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಪೃಥ್ವಿರಾಜ್ ಶೆಟ್ಟಿ,ಯತೀಶ್ ಕರ್ಕೇರ, ಸುಜಯ ಪೂಜಾರಿ, ಗಣೇಶ್ ನೆರ್ಗಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News