×
Ad

ಮುಖ್ಯ ನ್ಯಾಯಾಧೀಶರ ಮುಂದೆ ತುರ್ತು ಪ್ರಕರಣಗಳನ್ನು ಪ್ರಸ್ತಾಪಿಸುವ ಸಂಪ್ರದಾಯಕ್ಕೆ ಕೊನೆ

Update: 2018-05-04 20:49 IST

ಹೊಸದಿಲ್ಲಿ, ಮೇ.4: ವಕೀಲರು ಭಾರತೀಯ ಮುಖ್ಯ ನ್ಯಾಯಾಧೀಶರ ಮುಂದೆ ತುರ್ತು ಪ್ರಕರಣಗಳನ್ನು ಪ್ರಸ್ತಾಪಿಸುವ ಹಳೆ ಸಂಪ್ರದಾಯಕ್ಕೆ ಕೊನೆ ಹಾಡಿರುವ ಸರ್ವೋಚ್ಚ ನ್ಯಾಯಾಲಯ ಇನ್ನು ಮುಂದೆ ತುರ್ತು ವಿಚಾರಣೆಯ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯ ರಿಜಿಸ್ಟ್ರಾರ್ ಮುಂದೆ ಪ್ರಸ್ತಾಪಿಸಬೇಕು ಎಂದು ತಿಳಿಸಿದೆ.

ಬುಧವಾರದಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠದ ಮುಂದೆ ದಿನದ ಮೊದಲ ವಕೀಲರು ತಮ್ಮ ಪ್ರಕರಣದ ತುರ್ತು ಆಲಿಕೆಗೆ ಪ್ರಸ್ತಾಪ ಇಟ್ಟಾಗ, ನೀವು ರಿಜಿಸ್ಟ್ರಾರ್ ಬಳಿಗೆ ತೆರಳಿ ಎಂದು ಮಿಶ್ರಾ ಹಾಗೂ ಅವರ ಪೀಠದ ಇತರ ಸದಸ್ಯರಾದ ನ್ಯಾಯಾಧೀಶ ಎ.ಎಂ ಖಾನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಸೂಚಿಸಿದ್ದಾರೆ. ನಂತರ ಈ ಕುರಿತು ಆದೇಶ ನೀಡಿದ ನ್ಯಾಯಾಲಯ, ಇನ್ನು ಮುಂದೆ ತುರ್ತು ಪ್ರಕರಣಗಳನ್ನು ರಿಜಿಸ್ಟ್ರಾರ್ ಮುಂದೆ ಸಲ್ಲಿಸಬೇಕು. ಅವರು ಇಂಥ ಪ್ರಕರಣಗಳನ್ನು ಆಲಿಸಿ ಪಟ್ಟಿ ಮಾಡುತ್ತಾರೆ ಎಂದು ತಿಳಿಸಿದೆ.

ತುರ್ತು ಆಲಿಕೆಗೆ ಪ್ರಕರಣಗಳನ್ನು ಪಟ್ಟಿ ಮಾಡುವ ರಿಜಿಸ್ಟ್ರಾರ್ ಆದೇಶದ ಬಗ್ಗೆ ಅಸಮಾಧಾನವಿದ್ದರೆ ವಕೀಲರು ಮುಖ್ಯ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದು ಎಂದು ಪೀಠವು ತಿಳಿಸಿದೆ. ಕಳೆದ ವರ್ಷ ಸೆಪ್ಟೆಂಬರ್ 20 ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದಲ್ಲಿ, ಅಧಿಕೃತವಾಗಿ ನೇಮಕಗೊಂಡಿರುವ ವಕೀಲರು ಮಾತ್ರ ಸರದಿಯನ್ನು ತಪ್ಪಿಸಿ ಅಥವಾ ತುರ್ತು ಆಲಿಕೆಯ ಪ್ರಕರಣಗಳನ್ನು ಪ್ರಸ್ತಾಪಿಸಬಹುದು ಎಂದು ತಿಳಿಸಿತ್ತು. ಜನವರಿ 4ರಂದು ತನ್ನ ಆದೇಶಕ್ಕೆ ತಿದ್ದುಪಡಿ ತಂದ ನ್ಯಾಯಾಲಯ ಅಧಿಕೃತ ವಕೀಲರ ಜೊತೆಗೆ ಕಿರಿಯ ವಕೀಲರು ಕೂಡಾ ಸರದಿ ತಪ್ಪಿಸಿ ಅಥವಾ ತುರ್ತಾಗಿ ಪ್ರಕರಣಗಳನ್ನು ಆಲಿಸಲು ನ್ಯಾಯಾಲಯದ ಮುಂದೆ ಪ್ರಸ್ತಾಪ ಇಡಬಹುದು ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News