2017-18ರಲ್ಲಿ ಶೇ.30ರಷ್ಟು ರೈಲುಗಳು ವಿಳಂಬ: 3 ವರ್ಷಗಳಲ್ಲಿ ರೈಲ್ವೆಯ ಅತ್ಯಂತ ಕಳಪೆ ಸಮಯ ಪಾಲನೆ

Update: 2018-05-04 15:23 GMT

ಹೊಸದಿಲ್ಲಿ,ಮೇ 4: ಕಳೆದ 2017-18ನೇ ಸಾಲಿನಲ್ಲಿ ಶೇ.30ರಷ್ಟು ರೈಲುಗಳು ವಿಳಂಬವಾಗಿ ಸಂಚರಿಸಿದ್ದು,ಇದು ಮೂರು ವರ್ಷಗಳಲ್ಲಿ ಭಾರತೀಯ ರೈಲ್ವೆಯ ಅತ್ಯಂತ ಕಳಪೆ ಸಮಯ ಪಾಲನೆಯಾಗಿದೆ ಎಂದು ಅಧಿಕೃತ ಅಂಕಿಅಂಶಗಳು ಬೆಟ್ಟು ಮಾಡಿವೆ.

2016-17ನೇ ಸಾಲಿನಲ್ಲಿ ಶೇ.76.69ರಷ್ಟಿದ್ದ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಮಯ ಪಾಲನೆ 2017-18ನೇ ಸಾಲಿಗೆ ಶೇ.71.39ಕ್ಕೆ ಕುಸಿದಿದೆ. 2015-16ರಲ್ಲಿ ಶೇ.77.44ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸಿದ್ದವು.

ರೈಲ್ವೆಯು ಕೈಗೆತ್ತಿಕೊಂಡಿರುವ ಬೃಹತ್ ನಿರ್ವಹಣೆ ಕಾಮಗಾರಿಯು ಸಮಯ ಪಾಲನೆ ಸಾಧನೆಯ ಮೇಲೆ ನೇರ ಪರಿಣಾಮವನ್ನು ಬೀರಿದೆ ಎಂದು ಅಧಿಕಾರಿಗಳು ಹೇಳಿದರು.

ರೈಲ್ವೆಯು ಹಳಿಗಳ ಉನ್ನತೀಕರಣ,ಆಧುನೀಕರಣ ಮತ್ತು ನವೀಕರಣ ಕಾಮಗಾರಿಗಳನ್ನು ಬೃಹತ್ ಪ್ರಮಾಣದಲ್ಲಿ ನಡೆಸುತ್ತಿದೆ. ಇದರಿಂದಾಗಿ ಇತ್ತೀಚಿಗೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ.

ಸುರಕ್ಷತೆ ಮತ್ತು ಹಳಿಗಳ ಉನ್ನತೀಕರಣದೊಂದಿಗೆ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ರೈಲುಗಳ ಸಮಯ ಪಾಲನೆಯನ್ನು ಕಾಯ್ದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ರೈಲ್ವೆ ಸಚಿವಾಲಯದ ನಿರ್ದೇಶಕ(ಮಾಧ್ಯಮ ಮತ್ತು ಸಂವಹನ) ರಾಜೇಶ್ ದತ್ ಬಾಜಪೈ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

35 ವರ್ಷಗಳಲ್ಲಿ ಕಳೆದ ವರ್ಷ ಮೊದಲ ಬಾರಿಗೆ ರೈಲು ಅಪಘಾತಗಳ ಸಂಖ್ಯೆಯು ಎರಡಂಕಿಗಳಿಗೆ ಇಳಿದಿದೆ ಎನ್ನುವುದನ್ನೂ ಅಂಕಿಅಂಶಗಳು ತೋರಿಸಿವೆ.

 ರೈಲುಗಳು ವಿಳಂಬವಾಗಿ ಸಂಚರಿಸುತ್ತಿರುವುದು ಭಾರತೀಯ ರೈಲ್ವೆಗೆ ಮುಜುಗರವನ್ನುಂಟು ಮಾಡಿದೆ ಎಂದು ಗುರುವಾರ ವಲಯ ರೈಲ್ವೆ ಅಧಿಕಾರಿಗಳಿಗೆ ಕಳುಹಿಸಿರುವ ಸಂದೇಶದಲ್ಲಿ ತಿಳಿಸಿರುವ ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಕುಮಾರ್ ಲೋಹಾನಿ ಅವರು ಸಮಯ ಪಾಲನೆಯನ್ನು ಹಳಿಗೆ ತರಲು 15 ದಿನಗಳ ಅಭಿಯಾನವೊಂದನ್ನು ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಸಚಿವಾಲಯದಲ್ಲಿನ ಮೂಲಗಳು ಹೇಳಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News