×
Ad

‘ದಲಿತ ಪ್ರವಾಸೋದ್ಯಮ’ ಬಿಜೆಪಿಯ ಸಂಪ್ರದಾಯವಲ್ಲ: ಉ.ಪ್ರ.ಸಚಿವ ರಾಣಾ

Update: 2018-05-04 21:02 IST

 ಲಕ್ನೋ,ಮೇ 4: ಅಲಿಗಡದ ಲೋಹಗಡ ಗ್ರಾಮದ ದಲಿತರೋರ್ವರ ಮನೆಗೆ ತಾನು ಬಲವಂತದಿಂದ ನುಗ್ಗಿದ್ದೆ ಮತ್ತು ಅವರೊಂದಿಗೆ ಊಟ ಮಾಡಿದ್ದೆ ಎಂದು ಹೇಳಿರುವ ತನ್ನ ಟೀಕಾಕಾರರಿಗೆ ಶುಕ್ರವಾರ ಬಹಿರಂಗ ಸವಾಲನ್ನು ಹಾಕಿರುವ ಉತ್ತರ ಪ್ರದೇಶದ ಸಚಿವ ಸುರೇಶ ರಾಣಾ ಅವರು ’ದಲಿತ ಪ್ರವಾಸೋದ್ಯಮ’ವು ಬಿಜೆಪಿಯ ಸಂಪ್ರದಾಯದಲ್ಲಿಲ್ಲ ಎಂದು ಹೇಳಿದರು.

ತಾನು ಆಹಾರವನ್ನು ಹೊರಗಿನಿಂದ ತರಿಸಿಕೊಂಡಿದ್ದೆ ಎನ್ನುವುದನ್ನು ರುಜುವಾತುಗೊಳಿಸುವಂತೆ ತಾನು ಅವರಿಗೆ ಸವಾಲು ಹಾಕುತ್ತಿದ್ದೇನೆ. ವಾಸ್ತವದಲ್ಲಿ ಎಲ್ಲ ಆಹಾರ ಪದಾರ್ಥಗಳನ್ನು ಗ್ರಾಮಸ್ಥರೇ ಗ್ರಾಮದಲ್ಲಿ ಸಿದ್ಧಗೊಳಿಸಿದ್ದರು ಎಂದು ಹೇಳಿದ ಅವರು,ಸ್ಥಳೀಯ ಶಾಸಕ ಅನೂಪ್ ವಾಲ್ಮೀಕಿ ಮತ್ತು ಗ್ರಾಮ ಪ್ರಧಾನರು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಮರುದಿನ ಬೆಳಿಗ್ಗೆ ದಲಿತರ ಮನೆಯಲ್ಲಿ ಉಪಾಹಾರ ಸೇವನೆಯನ್ನು ಯೋಜಿಸಲಾಗಿತ್ತು. ಆದರೆ ಸಮುದಾಯ ಭವನದಲ್ಲಿ ಊಟ ಮಾಡುವ ಬದಲು ದಲಿತರ ಮನೆಯಲ್ಲಿಯೇ ಆಹಾರವನ್ನು ಸೇವಿಸುವ ಬಯಕೆಯನ್ನು ತಾನು ವ್ಯಕ್ತಪಡಿಸಿದ್ದೆ ಎಂದರು.

ರಾಣಾ ತನ್ನ ಆಹಾರ ಮತ್ತು ಕುಡಿಯುವ ನೀರನ್ನು ತನ್ನೊಂದಿಗೆ ಒಯ್ದಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಹೊರಬಿದ್ದಿದೆ.

ಸಚಿವರು ಮತ್ತು ಅವರ ಸಹಾಯಕರು ಊಟಕ್ಕಾಗಿ ದಲಿತ ವ್ಯಕ್ತಿಯ ಮನೆಗೆ ತೆರಳಿದ್ದರು ಮತ್ತು ಸಚಿವರ ಭೇಟಿಯ ಬಗ್ಗೆ ಕುಟುಂಬಕ್ಕೆ ಪೂರ್ವ ಮಾಹಿತಿ ಇಲ್ಲದ್ದರಿಂದ ಆಹಾರ ,ಖನಿಜ ನೀರು ಮತ್ತು ಊಟದ ಬಟ್ಟಲುಗಳನ್ನು ಹೊರಗಿನಿಂದ ತರಿಸಲಾಗಿತ್ತು ಎಂದು ವರದಿಗಳು ತಿಳಿಸಿದ್ದವು.

ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಸಮುದಾಯ ಭವನದ ಎದುರಿನಲ್ಲಿರುವ ದಲಿತ ಕುಟುಂಬದ ಮನೆಗೆ ತೆರಳಿದ್ದೆ ಮತ್ತು ಅವರೊಂದಿಗೆ ಊಟ ಮಾಡಿದ್ದೆ. ಅವರೊಂದಿಗೆ ಒಂದು ಗಂಟೆ ಮಾತನಾಡಿ ಅಲ್ಲಿಯೇ ಮಲಗಿದ್ದೆ ಎಂದು ರಾಣಾ ತಿಳಿಸಿದರು. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ರಾಣಾ,‘‘ಕಾಂಗ್ರೆಸ್ ನಾಯಕರು ಕೈಗೊಂಡಿರುವ ದಲಿತ ಪ್ರವಾಸೋದ್ಯಮವು ಬಿಜೆಪಿಯ ಸಂಪ್ರದಾಯವಲ್ಲ ಎನ್ನುವುದನ್ನು ಅವರಿಗೆ ತಿಳಿಸಲು ನಾನು ಬಯಸುತ್ತೇನೆ. ಅವರು ಸಮುದಾಯ ಭವನದಲ್ಲಿ ಒಂದು ರಾತ್ರಿ ಕಳೆದರೆ ಅವರಿಗೆ ಬಿಜೆಪಿಯ ಅಭಿಯಾನ ಅರ್ಥವಾಗುತ್ತದೆ. ನಾವು ಗ್ರಾಮವಾಸ್ತವ್ಯಗಳಲ್ಲಿ ಸಪ್ತ ತಾರಾ ಸೌಲಭ್ಯಗಳನ್ನು ನಮ್ಮೊಂದಿಗೆ ಒಯ್ಯುವುದಿಲ್ಲ. ವಾಸ್ತವದಲ್ಲಿ ಗ್ರಾಮಗಳಲ್ಲಿ ಲಭ್ಯವಿರುವ ಸೌಲಭ್ಯಗಳಲ್ಲಿಯೇ ನಮ್ಮ ವಾಸ್ತವ್ಯವನ್ನು ಮುಗಿಸುತ್ತೇವೆ’’ ಎಂದರು.

 ದಲಿತ ಸಮಾಜವು ತನ್ನ ಅತಿಥಿಗಳಿಗೆ ಒಳ್ಳೆಯ ಊಟವನ್ನು ಹಾಕುವ ಮಟ್ಟಕ್ಕೆ ಬೆಳೆದಿದೆ. ಹೀಗಿರುವಾಗ ನಿಮಗೇನು ಸಮಸ್ಯೆ ಎಂದು ಭೋಜನ ರಾಜಕೀಯದಲ್ಲಿ ತೊಡಗಿರುವವರಿಗೆ ತಾನು ಪ್ರಶ್ನಿಸುತ್ತೇನೆ. ವಾಸ್ತವದಲ್ಲಿ ದಲಿತರು,ಶೋಷಿತರು ಮತ್ತು ಅಭಿವೃದ್ಧಿ ವಂಚಿತರೊಡನೆ ಒಂದಾಗುವ ಪ್ರಧಾನಿ ನರೇಂದ್ರ ಮೋದಿಯವರ ಅಭಿಯಾನವು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತಿರುವುದರಿಂದ ತಾವು ರಾಜಕೀಯ ನೆಲೆಯನ್ನು ಕಳೆದುಕೊಳ್ಳುತ್ತಿದ್ದೇವೆಂದು ಈ ಜನರು ಕಳವಳ ಗೊಂಡಿದ್ದಾರೆ ಎಂದು ರಾಣಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News