×
Ad

ನರೇಂದ್ರ ಮೋದಿ ಸಪ್ನೋಂ ಕಾ ಸೌದಾಗರ್: ಆನಂದ ಶರ್ಮಾ

Update: 2018-05-04 21:07 IST

ಮಂಗಳೂರು, ಮೇ 4: ಬಿಜೆಪಿಗೆ ಮಾತ್ರವೇ ಪ್ರಧಾನಿಯಂತೆ ವರ್ತಿಸುತ್ತಿರುವ ನರೇಂದ್ರ ಮೋದಿ ಓಟಿಗಾಗಿ ಮತ್ತು ಸ್ವಾರ್ಥ ಸಾಧನೆಗಾಗಿ ಕೇವಲ ಸುಳ್ಳುಗಳನ್ನೇ ಹೇಳುತ್ತಿದ್ದಾರೆ. ಅವರೊಬ್ಬ ‘ಸಪ್ನೋ ಕಾ ಸೌದಾಗರ್’ (ಕನಸಿನ ವ್ಯಾಪಾರಿ) ಎಂದು ಕಾಂಗ್ರೆಸ್‌ನ ಕೇಂದ್ರ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಆನಂದ ಶರ್ಮ ಟೀಕಿಸಿದ್ದಾರೆ.

ಸುಳ್ಳು ಹೇಳುವುದರಲ್ಲಿ ಮೋದಿ ವಿಶ್ವ ದಾಖಲೆಯನ್ನೇ ನಿರ್ಮಿಸಿದ್ದು, ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ರಾಹುಲ್ ಗಾಂಧಿಗೆ ಕಾಗದ ನೋಡದೆ ಭಾಷಣ ಮಾಡಿ ಎನ್ನುವ ಮೋದಿ, ಕಾಗದ ನೋಡಿಯೂ ಸುಳ್ಳುಗಳನ್ನೇ ಹೇಳ್ತಾರೆ. ಅವರೇನೇ ಮಾತನಾಡಲಿ, ಜನರು ಅದನ್ನು ಗಂಭೀರವಾಗಿ ಪರಿಗಣಿಸಬಾರದು. ಪರಾಮರ್ಶನ ಮಾಡಬೇಕು ಎಂದವರು ಹೇಳಿದರು.

ಬಡ ರೈತರ ಸಾಲಮನ್ನಾ ಮಾಡದೆ ರೈತರಿಗೂ, ಸೈನ್ಯವನ್ನು ರಾಜಕೀಯಕ್ಕೆ ಬಳಕೆ ಮಾಡುವ ಮೂಲಕ ಸೈನಿಕರಿಗೂ ಮೋದಿ ಮೋಸ ಮಾಡಿದ್ದಾರೆ. ಮಹಿಳೆಯರಿಗೆ ಸುರಕ್ಷತೆ ನೀಡಲು ಸಾಧ್ಯವಾಗಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಯಡಿಯೂರಪ್ಪ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳಿದ್ದರೂ ಈಗ ಅವರಿಗೆ ಇದೊಂದು ದೊಡ್ಡ ಅನ್ನಿಸಿಲ್ಲ. ರೆಡ್ಡಿ ಸಹೋದರರಿಗೆ ಟಿಕೆಟ್ ನೀಡಿದ್ದಾರೆ. ಪನಾಮಾ ಪೇಪರ್‌ನಲ್ಲಿ ಹಲವರ ಹೆಸರು ಕೇಳಿಬಂದಿದ್ದರೂ ಕ್ರಮ ಕೈಗೊಂಡಿಲ್ಲ. ಕೇವಲ ಸುಳ್ಳು ಹೇಳಿಕೊಂಡೇ ಚುನಾವಣೆ ಎದುರಿಸಲು ಹೊರಟಿದ್ದಾರೆ. ಕರ್ನಾಟಕದ ಜನರಿಂದ ಓಟು ಕೇಳುವ ಅರ್ಹತೆ ಅವರಿಗಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಸರಕಾರದಲ್ಲಿ ಮೋದಿ ವಿರೋಧಿಗಳಿಗೆ ಒಂದು ರೀತಿಯ ಕಾನೂನಾದರೆ, ಬಿಜೆಪಿ ಮುಖಂಡರು, ಮಂತ್ರಿಗಳಿಗೆ ಇನ್ನೊಂದು ರೀತಿಯ ಕಾನೂನು. ಆಡಳಿತಾತ್ಮಕ ಸಂಸ್ಥೆಗಳಾದ ಸಿಬಿಐ ಮತ್ತು ಐಟಿಯನ್ನು ಒಂದು ಕಡೆ ವಿರೋಧಿಗಳನ್ನು ಮಟ್ಟ ಹಾಕಲು ಬಳಕೆ ಮಾಡುತ್ತಾರೆ. ಇನ್ನೊಂದೆಡೆ ಇವೇ ಸಂಸ್ಥೆಗಳನ್ನು ಉಪಯೋಗಿಸಿ ಬಿಜೆಪಿ ಮಂತ್ರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಇದು ಮೋದಿ ನೀತಿ ಎಂದು ಆನಂದ ಶರ್ಮಾ ಟೀಕಿಸಿದರು.

ಮೋದಿ ರಾಜ್ಯಕ್ಕೆ ಬಂದು ‘ಇಲ್ಲಿ ಬ್ಯಾಂಕಿಂಗ್ ಸಂಸ್ಕೃತಿ ಇದೆ’ ಎನ್ನುತ್ತಾರೆ. ಹಾಗಾದರೆ ಇವೇ ಬ್ಯಾಂಕ್‌ಗಳಿಂದ ಕೋಟಿಗಟ್ಟಲೆ ಹಣವನ್ನು ಲೂಟಿ ಹೊಡೆಯಲು ಬಿಟ್ಟದ್ದೇಕೆ? ನೀರವ್ ಮೋದಿಯಂಥ ತಮ್ಮ ಸ್ನೇಹಿತರೇ ಈ ಲೂಟಿಯಲ್ಲಿ ಸಹಭಾಗಿಗಳಾಗಿದ್ದರೂ ಮೋದಿ ವೌನ ಮುರಿಯಲ್ಲ. ಜನರು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಶರ್ಮ ಆರೋಪಿಸಿದರು.

ಗಾಂಧಿ, ವಿನೋಬಾ ಬಾವೆಯಂತಹ ಮಹಾನುಭಾವರು ಹುಟ್ಟಿ ಬೆಳೆದ ದೇಶದಲ್ಲೀಗ 130 ಕೋಟಿ ಜನರಿದ್ದಾರೆ. ಅನೇಕ ವೈವಿಧ್ಯತೆಗಳಿವೆ. ಸಂಸ್ಕೃತಿಗಳಿವೆ. ಇವರಲ್ಲಿ ಮೋದಿ ಮತ್ತು ಅಮಿತ್ ಶಾ ಮಾತ್ರ ಬುದ್ಧಿವಂತರೆಂದು ತಿಳಿದುಕೊಂಡಿದ್ದಾರೆ. ಇವರಿಬ್ಬರು ಸೇರಿ ಇಡೀ ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ. ಈವರೆಗಿನ ಯಾವ ಪ್ರಧಾನಿಯೂ ಮಾಡದ ಅನ್ಯಾಯವನ್ನು ಮೋದಿ ಮಾಡಿದ್ದಾರೆ. ಕೊನೆಗೆ ಸೈನ್ಯವನ್ನೂ ರಾಜಕೀಯ ಬೇಳೆ ಬೇಯಿಸಲು ಬಳಕೆ ಮಾಡಲು ಹೊರಟಿದ್ದಾರೆ. ಸೈನ್ಯ ಇರುವುದು ದೇಶಕ್ಕಾಗಿಯೇ ಹೊರತು ಮೋದಿ ಮತ್ತು ಶಾ ಅವರಿಗೆ ಸೀಮಿತವಲ್ಲ ಎಂದು ಕಿಡಿಕಾರಿದರು. ಎಐಸಿಸಿ ರಾಷ್ಟ್ರೀಯ ವಕ್ತಾರ ಜೈವೀರ್ ಶೇರ್ಗಿಲ್, ಮಹಾರಾಷ್ಟ್ರದ ಮಾಜಿ ಮಂತ್ರಿ ಸುರೇಶ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮತ್ತಿತರರಿದ್ದರು.

ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಸೆಂಡಾಫ್
ಅಮಿತ್ ಶಾ ಮಗ ಜೈ ಶಾ ಆಸ್ತಿ ಹಲವು ಪಟ್ಟು ದಿಢೀರ್ ಏರಿಕೆ ಆದದ್ದನ್ನು ತಡೆಯಲು ನರೇಂದ್ರ ಮೋದಿಗೆ ಸಾಧ್ಯವಾಗಲಿಲ್ಲ. ಆದರೆ ದೇಶದ ಯುವ ಜನರು ಪಕೋಡಾ ಮಾರಿ ಬದುಕಿ ಎಂದು ಸಲಹೆ ನೀಡುತ್ತಾರೆ. ಜನರಿಗೆ ಮೋದಿ ಸುಳ್ಳುಗಳೆಲ್ಲವೂ ಅರ್ಥವಾಗಿದೆ. ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಗೌರವಯುತವಾಗಿ ‘ಸಂಡಾಫ್’ ನೀಡಲಿದೆ ಎಂದು ಆನಂದ ಶರ್ಮ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News