ಗುರುಗ್ರಾಮ: ಕೇಸರಿ ಸಂಘಟನೆಗಳಿಂದ ಮತ್ತೆ ನಮಾಝ್‌ಗೆ ಅಡ್ಡಿ

Update: 2018-05-04 15:56 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮೇ 4: ಶುಕ್ರವಾರದ ಪ್ರಾರ್ಥನೆಯನ್ನು ಖಾಲಿ ಇರುವ ನಿವೇಶನದಲ್ಲಿ ನಡೆಸುವುದನ್ನು ವಿರೋಧಿಸುತ್ತಿರುವ ಕೇಸರಿ ಸಂಘಟನೆಗಳ ಕಾರ್ಯಕರ್ತರು ಗುರುಗ್ರಾಮ್‌ನ ವಿವಿಧೆಡೆ ಮುಸ್ಲಿಮರು ನಮಾಝ್ ನಡೆಸಲು ಮತ್ತೊಮ್ಮೆ ಅಡ್ಡಿಪಡಿಸಿದ್ದಾರೆ. ಹರ್ಯಾಣ ರಾಜ್ಯದ ಗುರುಗ್ರಾಮದಲ್ಲಿ ಕಳೆದ ಎಪ್ರಿಲ್ 20ರಂದು ಇದೇ ರೀತಿ ನಮಾಝ್‌ಗೆ ಅಡ್ಡಿ ಪಡಿಸಲಾಗಿತ್ತು. ಖಾಲಿ ಇರುವ ನಿವೇಶನದಲ್ಲಿ ನಮಾಝ್ ನಡೆಸುವುದನ್ನು ನಿಷೇಧಿಸಬೇಕೆಂದು ಕೇಸರಿ ಸಂಘಟನೆಗಳು ಆಗ್ರಹಿಸಿದ್ದವು. ಈ ಮಧ್ಯೆ ಪ್ರತಿಭಟನಾಕಾರರ ಮನವೊಲಿಸಿ ಪಟ್ಟು ಸಡಿಲಿಸುವಂತೆ ಮಾಡುವ ಬದಲು, ಮನೋಹರ್‌ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರಕಾರ ಕೆಲವು ಸಾರ್ವಜನಿಕ ನಿವೇಶನಗಳಲ್ಲಿ ನೋಟಿಸ್ ಲಗತ್ತೀಕರಿಸಿದ್ದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಹರ್ಯಾಣ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ಖಾಲಿ ನಿವೇಶನಗಳಲ್ಲಿ ಹೈಕೋರ್ಟ್ ಆದೇಶದ ಪ್ರಕಾರ ‘ಯಥಾಸ್ಥಿತಿ’ ಕಾಯ್ದುಕೊಳ್ಳಬೇಕೆಂದು ನೋಟಿಸ್‌ನಲ್ಲಿ ಸರಕಾರ ತಿಳಿಸಿದೆ. ಗುರುಗ್ರಾಮದ ಸೆಕ್ಟರ್ 53ರಲ್ಲಿ ಖಾಲಿ ಇರುವ ಸರಕಾರೀ ನಿವೇಶನದಲ್ಲಿ ಕಳೆದ ಎಪ್ರಿಲ್ 20ರಂದು ಕೆಲವರು ಶುಕ್ರವಾರದ ನಮಾಝ್ ನಡೆಸುತ್ತಿರುವಾಗ ಸುಮಾರು 500ರಷ್ಟು ಮಂದಿ ತಡೆಒಡ್ಡಿದ್ದರು. ‘ಜೈಶ್ರೀರಾಮ್’, ‘ರಾಧೇ ರಾಧೇ’ ಎಂಬಿತ್ಯಾದಿ ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರು ಕೇಸರಿ ಸಂಘಟನೆಯ ಸದಸ್ಯರು ಎಂಬ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ಇವರು ಸಮೀಪದ ಗ್ರಾಮದ ನಿವಾಸಿಗಳು ಎಂದು ತಿಳಿಸಿದ್ದರು. ಘಟನೆಗೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಎಪ್ರಿಲ್ 30ರಂದು ಸಂಯುಕ್ತ ಹಿಂದು ಸಂಘರ್ಷ ಸಮಿತಿ ಎಂಬ ಸಂಘಟನೆಯ ಆಶ್ರಯದಲ್ಲಿ ಗುರುಗ್ರಾಮ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಂಧಿತ ಆರು ಮಂದಿಯನ್ನು ಬಿಡುಗಡೆ ಮಾಡಬೇಕು ಹಾಗೂ ಖಾಲಿ ಇರುವ ಸರಕಾರಿ ನಿವೇಶನಗಳಲ್ಲಿ ನಮಾಝ್ ನಡೆಸುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಲಾಗಿತ್ತು. ಗುರುಗ್ರಾಮದಲ್ಲಿ 22 ಮಸೀದಿಗಳಿದ್ದು 106 ಬಯಲು ಪ್ರದೇಶಗಳಲ್ಲಿ ನಮಾಝ್ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News