ಗುಜರಾತ್‌ನಲ್ಲಿ ಎರಡು ವರ್ಷದ ಹಸುಳೆಯ ಅತ್ಯಾಚಾರ,ಹತ್ಯೆ

Update: 2018-05-04 16:09 GMT

ಮೋರ್ಬಿ,ಮೇ 4: ಅಪರಿಚಿತ ದುಷ್ಕರ್ಮಿಗಳು ಇಲ್ಲಿಯ ವಲಸಿಗ ಕೂಲಿ ಕಾರ್ಮಿಕ ದಂಪತಿಯ ಎರಡು ವರ್ಷ ಪ್ರಾಯದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು. ಇದರೊಂದಿಗೆ ಗುಜರಾತ್‌ನಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಸರಣಿ ಲೈಂಗಿಕ ದೌರ್ಜನ್ಯಕ್ಕೆ ಇನ್ನೊಂದು ಪ್ರಕರಣವು ಸೇರಿಕೊಂಡಿದೆ.

ಮಗುವಿನ ಹೆತ್ತವರು ಇಲ್ಲಿಯ ಸಿರಾಮಿಕ್ ಟೈಲ್ಸ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರಾಗಿದ್ದು,ತಮಗೆ ನೀಡಲಾಗಿರುವ ವಸತಿಗೃಹದಲ್ಲಿ ವಾಸವಿದ್ದಾರೆ. ಮಗು ಬುಧವಾರ ರಾತ್ರಿಯಿಂದ ನಾಪತ್ತೆಯಾಗಿದ್ದು,ಗುರುವಾರ ಸಂಜೆ ಸಮೀಪದ ಹಳ್ಳದಲ್ಲಿ ಶವ ಪತ್ತೆಯಾಗಿದೆ. ಸಾವಿಗೆ ನಿಖರವಾದ ಕಾರಣಗಳನ್ನು ತಿಳಿಯಲು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಅಪರಿಚಿತ ದುಷ್ಕರ್ಮಿಗಳ ಪತ್ತೆಗಾಗಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದರು. ಕಳೆದ ಎಪ್ರಿಲ್‌ನಲ್ಲಿ ರಾಜ್ಯದ ಸೂರತ್ ನಗರದ ಪಂಡೇಸರ ಪ್ರದೇಶದಲ್ಲಿ 22ರ ಹರೆಯದ ಬಾಲಕಿಯ ಶವ ಪತ್ತೆಯಾಗಿತ್ತು. ಆಕೆಯನ್ನು ಹಲವಾರು ಬಾರಿ ಅತ್ಯಾಚಾರಗೈದು ಹತ್ಯೆ ಮಾಡಲಾಗಿತ್ತು. 86 ಗಾಯಗಳಿದ್ದ ಶವದ ಗುರುತು ಪತ್ತೆ ಹಚ್ಚಲು ಪೊಲೀಸರಿಗೆ 15 ದಿನಗಳು ಬೇಕಾಗಿದ್ದವು. ಆಕೆ ತನ್ನ ತಾಯಿಯ ಕೊಲೆಗೆ ಸಾಕ್ಷಿಯಾಗಿದ್ದು ಈ ಬರ್ಬರ ಕ್ರೌರ್ಯಕ್ಕೆ ಕಾರಣವಾಗಿತ್ತು. ತಾಯಿ ಮತ್ತು ಮಗಳು ಜೀತದಾಳುಗಳಾಗಿದ್ದರು ಎನ್ನುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ರಾಜಕೋಟ್‌ನಲ್ಲಿ ಆರು ಜನರ ಗುಂಪು ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ 11ರ ಹರೆಯದ ಬಾಲಕಿಯ ಮೇಲೆ ಎಂಟು ತಿಂಗಳ ಕಾಲ ಅತ್ಯಾಚಾರವೆಸಗಿದ್ದು, ಆಕೆ ಮಾರ್ಚ್‌ನಲ್ಲಿ ಹೆಣ್ಣುಮಗುವಿಗೆ ಜನನ ನೀಡಿದ್ದಳು. ಆದರೆ ಮಗು ಬದುಕುಳಿಯಲಿಲ್ಲ. ಬಾಲಕಿ ಕೆಲಸ ಮಾಡುತ್ತಿದ್ದ ಮನೆಯ ಮಾಲಿಕ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News