ಆ್ಯಂಬುಲೆನ್ಸ್ ಇಲ್ಲದೆ ಮಹಿಳೆಯನ್ನು ಕೈಗಾಡಿಯಲ್ಲಿ ಆಸ್ಪತ್ರೆಗೆ ಸಾಗಿಸಿದರು!

Update: 2018-05-04 16:20 GMT

ಲಕ್ನೊ, ಮೇ.4: ಆ್ಯಂಬುಲೆನ್ಸ್ ಸಿಗದ ಕಾರಣ ರೋಗಿ ಮಹಿಳೆಯನ್ನು ಕೈಗಾಡಿಯಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಿದ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಪರಿಣಾಮವಾಗಿ ಐದು ಗಂಟೆಗಳ ಕಾಲ ಮಹಿಳೆ ಚಿಕಿತ್ಸೆ ಸಿಗದೆ ಪರದಾಡಿದ್ದಾರೆ. ಸೋನಿ ಎಂಬ ಮಹಿಳೆಯನ್ನು ಐದು ಕಿ.ಮೀ ವರೆಗೆ ಕೈಗಾಡಿಯಲ್ಲೇ ಮಲಗಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆಕೆಗೆ ಆಸ್ಪತ್ರೆಯಲ್ಲಿ ಯಾವ ವೈದ್ಯನೂ ಚಿಕಿತ್ಸೆ ನೀಡದಿರುವ ಬಗ್ಗೆ ಮಾಹಿತಿ ಪಡೆದ ಮುಖ್ಯ ವೈದ್ಯಕೀಯ ವರಿಷ್ಠಾಧಿಕಾರಿ ಆರ್.ಪಿ ಶಕ್ಯಾ ಕೂಡಲೇ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸುವಂತೆ ಸೂಚಿಸಿದ್ದಾರೆ. ಆಸ್ಪತ್ರೆಯ ಪರಿಶೀಲನೆ ನಡೆಸಿದಾಗ ವೈದ್ಯರು ಗೈರಾಗಿರುವುದು ಬೆಳಕಿಗೆ ಬಂದಿದೆ. ಸೋನಿ ಮಾರ್ಚ್ 30ರಂದು ಖಾಸಗಿ ನರ್ಸಿಂಗ್ ಹೋಂನಲ್ಲಿ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ದುರ್ಬಲವಾಗಿದ್ದ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಮೃತಪಟ್ಟಿತ್ತು. ಹೆರಿಗೆಯ ನಂತರ ಆಕೆಯ ಮೂತ್ರನಾಳಕ್ಕೆ ಹಾನಿಯಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದರು.

ಆಕೆಯ ಗರ್ಭಾಶಯವನ್ನು ತೆಗೆದ ವೈದ್ಯರು ಮೂತ್ರನಾಳಕ್ಕೆ ಹೊಲಿಗೆ ಹಾಕಿದ್ದರು. ಆದರೆ ಕೆಲವು ದಿನಗಳ ನಂತರ ಸೋನಿಗೆ ತೀವ್ರ ಹೊಟ್ಟೆ ನೋವು ಕಾಡಲು ಆರಂಭಿಸಿತ್ತು. ಮೊದಲು ಆಕೆಯ ಪತಿ ಅನುಜ್ ಕುಮಾರ್ ಆಕೆಯನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದರು. ಅಲ್ಲಿ ಆಕೆಗೆ ಹೆಚ್ಚಿನ ಚಿಕಿತ್ಸೆ ಇರುವ ಕಾರಣ ಕನೌಜ್ ಅಥವಾ ಕಾನ್ಪುರಕ್ಕೆ ಸಾಗಿಸಲು ವೈದ್ಯರು ಸೂಚಿಸಿದ್ದರು. ಬುಧವಾರದಂದು ಅನುಜ್ 108ಕ್ಕೆ ಕರೆ ಮಾಡಿ ಆ್ಯಂಬುಲೆನ್ಸ್ ಕಳುಹಿಸಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಸೋನಿ ನೋವಿನಿಂದ ನರಳುತ್ತಿದ್ದ ಕಾರಣ ಅನುಜ್ ಮತ್ತಾತನ ಸಹೋದರಿ ಶಿಖಾ ಆಕೆಯನ್ನು ಕೈಗಾಡಿಯಲ್ಲಿ ಆಸ್ಪತ್ರೆಗೆ ಸಾಗಿಸಲು ನಿರ್ಧರಿಸಿದರು. ಆ್ಯಂಬುಲೆನ್ಸ್ ಲಭ್ಯವಿಲ್ಲದಿರುವುದು ಒಂದು ಗಂಭೀರ ವಿಷಯವಾಗಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News