ಬುದ್ಧನ ಕುರಿತ ತ್ರಿಪುರ ಸಿಎಂ ಭಾಷಣವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ: ಸಚಿವಾಲಯದ ಸ್ಪಷ್ಟನೆ
ಅಗರ್ತಲ, ಮೇ 4: ಬುದ್ಧ ಪೂರ್ಣಿಮೆಯ ದಿನದಂದು ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ದೇವ್ ಮಾಡಿದ ಭಾಷಣವನ್ನು ಕೆಲವು ವರ್ಗದ ಮಾಧ್ಯಮಗಳಲ್ಲಿ ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟಪಡಿಸಿದೆ.
ಕಳೆದ ಸೋಮವಾರ ಬುದ್ಧ ಪೂರ್ಣಿಮೆಯ ದಿನದಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಸ್ವಾಮಿ ಬುದ್ಧರು ದೇಶದಾದ್ಯಂತ ಬರಿಗಾಲಲ್ಲಿ ಸಂಚರಿಸಿ ಶಾಂತಿ, ಸೌಹಾರ್ದ ಹಾಗೂ ಸಮೃದ್ಧಿಯ ಸಂದೇಶ ಸಾರಿದ್ದರು. ಅವರು ಅಂದು ಸಂಚರಿಸಿದ್ದ ಕೆಲವು ಪ್ರದೇಶಗಳು ಇಂದು ಮ್ಯಾನ್ಮಾರ್, ಜಪಾನ್, ಟಿಬೆಟ್ ಎಂದು ಕರೆಸಿಕೊಳ್ಳುತ್ತಿವೆ ಎಂದು ಹೇಳಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಆದರೆ ಇದು ತಪ್ಪು ವ್ಯಾಖ್ಯಾನವಾಗಿದೆ. ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ - ಸ್ವಾಮಿ ಬುದ್ಧರು ಅಂದಿನ ಭರತ ವರ್ಷ(ಭಾರತದಾದ್ಯಂತ)ದಾದ್ಯಂತ ಬರಿಗಾಲಲ್ಲಿ ಸಂಚರಿಸಿ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಯ ಸಂದೇಶ ಸಾರಿದ್ದು, ಈ ಸಂದೇಶವು ಇಂದು ಬರ್ಮ, ಜಪಾನ್, ಟಿಬೆಟ್ ಎಂದು ಕರೆಸಿಕೊಳ್ಳುವ ದೇಶಗಳಿಗೂ ತಲುಪಿತ್ತು - ಎಂದು ಹೇಳಿರುವುದಾಗಿ ಸಚಿವಾಲಯ ಸ್ಪಷ್ಟನೆ ನೀಡಿದೆ.
ಮುಖ್ಯಮಂತ್ರಿಯವರು ಮಾಡಿದ ಭಾಷಣ ಇತಿಹಾಸದ ದೃಷ್ಟಿಕೋನದಿಂದ ನೋಡಿದರೂ ಸರಿಯಾಗಿಯೇ ಇದೆ. ಆದರೆ ಇದನ್ನು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ತ್ರಿಪುರ ಸರಕಾರದ ಹೆಚ್ಚುವರಿ ಕಾರ್ಯದರ್ಶಿ ಮಿಲಿಂದ್ ರಾಮ್‌ಟೆಕೆ ತಿಳಿಸಿದ್ದಾರೆ.