ಹೊಸ ಶಿಕ್ಷಣ ನೀತಿಯಲ್ಲಿ ಹಿಂದಿಗೆ ಅರ್ಹ ಪ್ರಾಧಾನ್ಯತೆ : ಸತ್ಯಪಾಲ್ ಸಿಂಗ್
ಹೊಸದಿಲ್ಲಿ, ಮೇ 4: ಯಾವುದೇ ದೇಶ ಅಥವಾ ಸಮಾಜಕ್ಕೆ ಭಾಷೆಯು ಅತ್ಯಂತ ಮಹತ್ವವಾಗಿದ್ದು ಇದೀಗ ರೂಪಿಸಲಾಗುತ್ತಿರುವ ಹೊಸ ಶಿಕ್ಷಣ ನೀತಿಯು ಹಿಂದಿಗೆ ಸಲ್ಲತಕ್ಕ ಪ್ರಾಧಾನ್ಯತೆಯನ್ನು ದೊರಕಿಸಲಿದೆ ಎಂದು ಕೇಂದ್ರದ ಮಾನವಸಂಪನ್ಮೂಲ ಇಲಾಖೆಯ ಸಹಾಯಕ ಸಚಿವ ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ.
1835ರಲ್ಲಿ ದೇಶದಲ್ಲಿ ಶಿಕ್ಷಣ ನೀತಿ ಜಾರಿಗೆ ಬಂದಾಗ ಲಾರ್ಡ್ ಮೆಕಾಲೆ , ಭಾರತದ ಜನತೆ ತಮ್ಮ ರಕ್ತ ಹಾಗೂ ನೋಟದಲ್ಲಿ ಭಾರತೀಯರಾಗಿ ಉಳಿದರೂ ಅವರ ಚಿಂತನೆಗಳು ಬ್ರಿಟಿಷರದ್ದಾಗಿರುತ್ತದೆ ಎಂದಿದ್ದರು. ಮಾತೃಭಾಷೆಗಾಗಿ ಕೆಲಸ ಮಾಡುವ ಕುರಿತು ನಾವು ಹೆಚ್ಚು ಮಾತಾಡಿದಾಗಲೆಲ್ಲಾ ನಮ್ಮ ಚಿಂತನೆಗಳು ಅಲ್ಲೇ ಸ್ಥಗಿತಗೊಳ್ಳುತ್ತವೆ ಎಂದು ಸತ್ಯಪಾಲ್ ಸಿಂಗ್ ಹೇಳಿದರು.
ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಷನ್(ಎಐಸಿಟಿಇ)ಯ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ದೇಶದಲ್ಲಿ ಹಿಂದಿಗೆ ಸಲ್ಲತಕ್ಕ ಪ್ರಾಧಾನ್ಯತೆ ದೊರಕದಂತೆ ತಡೆಯುವ ಮುಖಂಡರು ಯಾರು ಎಂದು ಪ್ರಶ್ನಿಸಿದ ಸಚಿವರು, ಶೀಘ್ರದಲ್ಲೇ ನೂತನ ಶಿಕ್ಷಣ ನೀತಿ ಬರಲಿದೆ. ಇಂಗ್ಲಿಷ್ ತಿಳಿಯದಿದ್ದರೆ ಕೀಳರಿಮೆ ಬೆಳೆಸಿಕೊಳ್ಳುವುದು ನಿಜಕ್ಕೂ ದುರದೃಷ್ಟಕರ. ನೀವು ಹೇಗೆ ತಾಯಿಯನ್ನು ಬದಲಿಸಲು ಸಾಧ್ಯವಿಲ್ಲವೋ ಅದೇ ರೀತಿ ನಿಮ್ಮ ಭಾಷೆಯನ್ನೂ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ತಾಂತ್ರಿಕ ಶಿಕ್ಷಣದ ಬಗ್ಗೆ ಹಿಂದಿಯಲ್ಲಿ ಅತ್ಯುತ್ತಮ ಕೃತಿಗಳನ್ನು ಬರೆದ ಲೇಖಕರನ್ನು ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಯಿತು.