ಅಮು ವಿವಾದ: ಅಲಿಗಡದಲ್ಲಿ ಇಂಟರ್ ನೆಟ್ ಸ್ಥಗಿತ
ಅಲಿಗಡ,ಮೆ 4: ಅಲಿಗಡ ಮುಸ್ಲಿಂ ವಿವಿ(ಅಮು)ಯಲ್ಲಿ ಪಾಕಿಸ್ತಾನದ ಜನಕ ಮುಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರ ಕುರಿತು ವಿವಾದದ ನಡುವೆಯೇ ಶುಕ್ರವಾರ ಅಲಿಗಡ ಜಿಲ್ಲೆಯಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಜಿನ್ನಾ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿರುವ ಪ್ರಚೋದನಾಕಾರಿ ಸಂದೇಶಗಳಿಗೆ ಕಡಿವಾಣ ಹಾಕಲು ಅಲಿಗಡ ಜಿಲ್ಲಾಧಿಕಾರಿ ಚಂದ್ರಭೂಷಣ ಸಿಂಗ್ ಅವರು ಶುಕ್ರವಾರ ಅಪರಾಹ್ನ ಎರಡು ಗಂಟೆಯಿಂದ ಮಧ್ಯರಾತ್ರಿಯವರೆಗೆ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿ ಆದೇಶಿಸಿದ್ದಾರೆ.
ಅಮು ವಿದ್ಯಾರ್ಥಿ ಯೂನಿಯನ್ ಹಾಲ್‌ನಲ್ಲಿ 1938ರಿಂದಲೂ ಜಿನ್ನಾ ಅವರ ಭಾವಚಿತ್ರವನ್ನು ತೂಗುಹಾಕಲಾಗಿದೆ. ಭಾರತದ ವಿಭಜನೆಗೆ ಕಾರಣಕರ್ತರು ಎನ್ನಲಾಗಿರುವ ಜಿನ್ನಾ ಅವರ ಭಾವಚಿತ್ರವನ್ನು ತೂಗುಹಾಕಿರುವುದಕ್ಕೆ ಸಮರ್ಥನೆಯನ್ನು ಕೋರಿ ಅಲಿಗಡ ಬಿಜೆಪಿ ಸಂಸದ ಸತೀಶ ಗೌತಮ ಅವರು ಅಮು ಕುಲಪತಿ ತಾರಿಕ್ ಮನ್ಸೂರ್ ಅವರಿಗೆ ಈ ವಾರದ ಆರಂಭದಲ್ಲಿ ಪತ್ರವೊಂದನ್ನು ಬರೆದಾಗಿನಿಂದ ವಿವಾದವು ಭುಗಿಲ್ಲೆದ್ದಿದೆ.
ಜಿನ್ನಾ ಅವರ ಭಾವಚಿತ್ರವನ್ನು ತೆಗೆಯುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರೂ ಗುರುವಾರ ಕರೆ ನೀಡಿದ್ದರು.
ಬುಧವಾರ ಹಿಂದೂ ಯುವವಾಹಿನಿ ಮತ್ತು ಎಬಿವಿಪಿ ಕಾರ್ಯಕರ್ತರು ಅಮು ಕ್ಯಾಂಪಸ್‌ನ್ನು ಪ್ರವೇಶಿಸಿ ಜಿನ್ನಾ ಅವರ ಪ್ರತಿಕೃತಿಯನ್ನು ದಹಿಸಿದ ಬಳಿಕ ಹಿಂಸಾಚಾರ ನಡೆದಿತ್ತು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಜಾಥಾದಲ್ಲಿ ತೆರಳಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ ಎಂದು ಅಮು ವಿದ್ಯಾರ್ಥಿ ಒಕ್ಕೂಟದ ನಾಯಕರು ತಿಳಿಸಿದ್ದಾರೆ.
ಜಿನ್ನಾ ಅವರ ಭಾವಚಿತ್ರವನ್ನು ತೆಗೆಯುವುದಿಲ್ಲ ಎಂದು ಅಮು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.