×
Ad

ಪತ್ರಕರ್ತ ಉಪೇಂದ್ರ ರೈ ಬಂಧನ: ಹಸ್ತಕ್ಷೇಪ ಮಾಡಲು ಸುಪ್ರೀಂ ನಕಾರ

Update: 2018-05-04 22:19 IST

ಹೊಸದಿಲ್ಲಿ, ಮೇ.4: ಸಂಶಯಾಸ್ಪದ ಆರ್ಥಿಕ ವ್ಯವಹಾರ ನಡೆಸಿದ ಆರೋಪದಲ್ಲಿ ಸಿಬಿಐಯಿಂದ ಬಂಧನಕ್ಕೊಳಗಾಗಿರುವ ಪತ್ರಕರ್ತ ಉಪೇಂದ್ರ ರೈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ತಿಳಿಸಿದೆ. ಭದ್ರತೆಯನ್ನು ಕೋರಿ ರೈ ಹಾಕಿರುವ ಅರ್ಜಿಯನ್ನು ಪರಿಶೀಲಿಸದಿರುವ ಕಾರಣ ಅವರ ಬಂಧನದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಾಧೀಶ ಎ.ಕೆ ಸಿಕ್ರಿ ಹಾಗು ಅಶೋಕ್ ಭೂಷಣ್ ಅವರ ಪೀಠವು ತಿಳಿಸಿದೆ. ಸಂಶಯಾಸ್ಪದ ಹಣದ ವ್ಯವಹಾರ ಹಾಗೂ ನಾಗರಿಕ ವಾಯುಯಾನ ಭದ್ರತಾ ಮಂಡಳಿ (ಬಿಸಿಎಎಸ್) ನೀಡುವ ವಿನಾಮ ನಿಲ್ದಾಣ ಪ್ರವೇಶ ಪಾಸನ್ನು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿರುವ ಆರೋಪದಲ್ಲಿ ಪತ್ರಕರ್ತ ಉಪೇಂದ್ರ ರೈಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. 2ಜಿ ತರಂಗಗುಚ್ಚ ಹಂಚಿಕೆ ಹಗರಣ ಪ್ರಕರಣದ ತನಿಖೆ ನಡೆಸುತ್ತಿದ್ದ ತಂಡದ ಸದಸ್ಯರಾಗಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಯ ವಿರುದ್ಧ ಬರೆದ ಕಾರಣಕ್ಕಾಗಿ ತನ್ನನ್ನು ಸುಳ್ಳು ಆರೋಪದಲ್ಲಿ ಬಂಧಿಸಲಾಗಿದೆ ಎಂದು ರೈ ಆರೋಪಿಸಿದ್ದಾರೆ. ಬಂಧನಕ್ಕೂ ಮೊದಲು ಸಿಬಿಐ ಅಧಿಕಾರಿಗಳು ರೈ ಹಾಗೂ ಇತರ ಇಬ್ಬರನ್ನು ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಒಂದಿಡೀ ದಿನ ವಿಚಾರಣೆ ನಡೆಸಿದ್ದಾರೆ. ರೈ ಜೊತೆಗೆ ಏರ್ ವನ್ ಏವಿಯೇಶನ್ ಪ್ರೈ.ಲಿ.ನ ಮುಖ್ಯ ಭದ್ರತಾ ಅಧಿಕಾರಿ ಪ್ರಸೂನ್ ರೋಯ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. 2017ರಲ್ಲಿ ಉಪೇಂದ್ರ ರೈ ಬ್ಯಾಂಕ್ ಖಾತೆಗೆ 79 ಕೋಟಿ ರೂ. ಜಮೆಯಾಗಿತ್ತು. ಇದರಲ್ಲಿ 78.51 ಕೋಟಿ ರೂ.ವನ್ನು ತಕ್ಷಣ ನಗದೀಕರಿಸಲಾಗಿತ್ತು ಎಂದು ಸಿಬಿಐ ತನ್ನ ದೂರಿನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News