×
Ad

ಅಭಿವೃದ್ಧಿ ಕೆಲಸಗಳೇ ಸಚಿವ ಖಾದರ್‌ಗೆ ಶ್ರೀರಕ್ಷೆ: ಸಂತೋಷ್ ಶೆಟ್ಟಿ ಅಸೈಗೋಳಿ

Update: 2018-05-04 22:25 IST

ಮಂಗಳೂರು, ಮೇ 4: ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಈವರೆಗೆ ವಿವಿಧ ರಂಗಗಳಲ್ಲಾದ ಅಭಿವೃದ್ಧಿಯು ಸಚಿವ ಖಾದರ್‌ಗೆ ಶ್ರೀರಕ್ಷೆಯಾಗಿದೆ. ಹಾಗಾಗಿ ನಾವು ಪ್ರಚಾರ ಹೋದಲ್ಲೆಲ್ಲಾ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ 14 ಗ್ರಾಪಂ, ಕೋಟೆಕಾರು ಪಟ್ಟಣ ಪಂಚಾಯತ್, ಉಳ್ಳಾಲ ನಗರ ಸಭೆ ಇದೆ. ಇಲ್ಲೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ರಾತ್ರಿ ಹಗಲೆನ್ನದೆ ಜಾತಿ, ಮತ ಬೇಧಭಾವ ಮರೆತು ಖಾದರ್ ಪರವಾಗಿ ದುಡಿಯುತ್ತಿದ್ದಾರೆ. ಮತದಾರರು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಸಚಿವ ಖಾದರ್‌ರ ಅಭಿವೃದ್ಧಿಯೇ ಅವರ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಹೇಳಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ನಾನೊಬ್ಬ ಬಂಟ, ಬಿಜೆಪಿಯ ಅಭ್ಯರ್ಥಿ ಕೂಡ ಬಂಟ ಸಮುದಾಯಕ್ಕೆ ಸೇರಿದವರು. ಸ್ವಾಭಿಮಾನಿ ಗಳಾದ ಬಂಟರು ಚುನಾವಣೆ ಸಂದರ್ಭ ಜಾತಿಗೆ ಸೀಮಿತಗೊಳ್ಳಲಾರರು. ಸಚಿವ ಖಾದರ್‌ರ ಕಾರ್ಯವೈಖರಿಗೆ ಮನ ಸೋತಿರುವ ಬಂಟ ಸಮುದಾಯದ ಬಹುತೇಕ ಮಂದಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಚಿವ ಖಾದರ್ ಮಾಡಿದ ಅಭಿವೃದ್ಧಿ, ಜನಪರ ಸೇವೆ ಹಾಗೂ ರಾಜ್ಯದುದ್ದಗಲಕ್ಕೂ ಅವರ ಜನಪ್ರಿಯತೆಯನ್ನು ತಿಳಿದುಕೊಂಡು ಖಾದರ್‌ಗೆ ಮತ ಚಲಾಯಿಸಲಿದ್ದಾರೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಈ ಕ್ಷೇತ್ರದ ಬಗ್ಗೆ ಪರಿಚಯವೇ ಇಲ್ಲ. ಅವರಿಗೆ ಇಲ್ಲಿ ಹೆಚ್ಚಿನ ಸಂಪರ್ಕವೇ ಇಲ್ಲ. ಜನರ ಪರಿಚಯ ಕೂಡ ಅವರಿಗಿಲ್ಲ. ಅಲ್ಲದೆ ಅವರ ಅಭಿವೃದ್ಧಿ ಕೂಡ ಇಲ್ಲಿ ಶೂನ್ಯ. ಈ ಕ್ಷೇತ್ರಕ್ಕೆ ಏನೇನೂ ಕೊಡುಗೆ ನೀಡದ ಅವರಿಗೆ ಮತ ಯಾಚಿಸುವ ಅರ್ಹತೆಯೂ ಇಲ್ಲ. ಹಾಗಾಗಿ ಹೋದಲ್ಲೆಲ್ಲಾ ನಮಗೆ ಅಭೂತಪೂರ್ವ ಸ್ವಾಗತ ಸಿಗುತ್ತದೆ. ಇಂತಹ ಸ್ವಾಗತ, ಪ್ರೀತಿ ನಮಗೆ ಹಿಂದೆಯೂ ಸಿಕ್ಕಿರಲಿಲ್ಲ. ರಸ್ತೆಗಳ ಅಭಿವೃದ್ಧಿ, ಸರಕಾರಿ ಜಮೀನಿನಲ್ಲಿ ಕುಳಿತವರಿಗೆ 94 ಸಿಸಿ ಮೂಲಕ ಹಕ್ಕುಪತ್ರ ನೀಡಿದ್ದೆಲ್ಲವೂ ಖಾದರ್‌ಗೆ ಪೂರಕವಾಗಲಿದೆ ಎಂದು ಸಂತೋಷ್ ಶೆಟ್ಟಿ ಅಭಿಪ್ರಾಯಪಟ್ಟರು.

ಬಿಜೆಪಿಗರಿಗೆ ಚುನಾವಣೆ ಸಂದರ್ಭ ಮಾತ್ರ ಹಿಂದೂಗಳ ನೆನಪು ಆಗುತ್ತದೆ. ಅದರಂತೆ ಈ ಕ್ಷೇತ್ರದಲ್ಲೂ ಕೂಡಾ ಬಿಜೆಪಿಗರು ಹಿಂದೂಗಳನ್ನು ನೆನಪಿಸಲು ಪ್ರಯತ್ನಿಸಿದರು. ಆದರೆ, ಖಾದರ್‌ರ ಜನಪ್ರಿಯತೆಗೆ ಮನಸೋತಿದ್ದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದ ವಿವಿಧ ಭಾಗ್ಯಗಳ ಫಲಾನುಭವಿ ಗಳಿಗೆ ವಸ್ತುಸ್ಥಿತಿ ಏನೂಂತ ಮನವರಿಕೆಯಾಗಿದೆ. ಹಾಗಾಗಿ ಬಿಜೆಪಿಗರ ಅಪಪ್ರಚಾರಕ್ಕೆ ಕಿವಿಕೊಡದೆ ಖಾದರ್‌ರ ಜೊತೆಗೆ ನಿಂತಿದ್ದಾರೆ ಎಂದು ಸಂತೋಷ್ ಶೆಟ್ಟಿ ಹೇಳಿದರು.

ಜೆಡಿಎಸ್ ಈ ಕ್ಷೇತ್ರದಲ್ಲಿ ಕ್ಷೀಣಿಸಿದೆ. ಎಸ್‌ಡಿಪಿಐ ಕಣದಲ್ಲಿ ಇಲ್ಲದಿದ್ದುದು ನಮಗೆ ವರದಾನವಾಗಲಿದೆ. ಬಿಜೆಪಿ ಬಿಲ್ಲವರಿಗೆ ಟಿಕೆಟ್ ನೀಡಿಲ್ಲ. ಇದರಿಂದ ಬಿಲ್ಲವರು ಅಸಮಾಧಾನಗೊಂಡಿದ್ದು, ಅದು ಕಾಂಗ್ರೆಸ್‌ಗೆ ಪೂರಕ ವಾತಾವರಣ ಸೃಷ್ಟಿಸಲಿದೆ. ಹಾಗಾಗಿ ಕಳೆದ ಬಾರಿಗಿಂತ ನಾವು ಅತ್ಯಧಿಕ ಮತಗಳಿಂದ ಖಾದರ್ ಗೆಲುವು ಸಾಧಿಸಲಿದ್ದಾರೆ ಎಂದು ಸಂತೋಷ್ ಶೆಟ್ಟಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News