ಸೇನಾ ವೆಚ್ಚ: ಜಗತ್ತಿನ ಟಾಪ್ 5 ರಾಷ್ಟ್ರಗಳ ಸಾಲಿಗೆ ಭಾರತ
ಸ್ಟಾಕ್‌ಹೋಮ್,ಮೇ 4: 2017ರಲ್ಲಿ ಭಾರತವು, ಮಿಲಿಟರಿಗಾಗಿ ಅತ್ಯಧಿಕ ವೆಚ್ಚ ಮಾಡುವ ಜಗತ್ತಿನ ಐದು ರಾಷ್ಟ್ರಗಳಲ್ಲೊಂದಾಗಿದೆಯೆಂದು ಸ್ಟಾಕ್‌ಹೋಮ್‌ನ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್‌ಐಪಿಆರ್‌ಐ) ಗುರುವಾರ ವರದಿ ಮಾಡಿದೆ.
2017ರಲ್ಲಿ ಭಾರತವು ಸೇನೆಗಾಗಿ ಬರೋಬ್ಬರಿ 63.9 ಶತಕೋಟಿ ಡಾಲರ್‌ಗಳನ್ನು ವೆಚ್ಚ ಮಾಡಿದ್ದು, ಇದು 2016ರಲ್ಲಿ ಅದು ಮಾಡಿದ ಮಿಲಿಟರಿ ವೆಚ್ಚಕ್ಕಿಂತ ಶೇ.5.5ರಷ್ಟು ಅಧಿಕವಾಗಿದೆ.
ಭಾರತದ ನೆರೆಹೊರೆಯ ದೇಶವಾದ ಚೀನಾ ಕೂಡಾ ಅತ್ಯಧಿಕ ಸೇನಾ ವೆಚ್ಚದ ರಾಷ್ಟ್ರಗಳಲ್ಲೊಂದಾಗಿದ್ದು, 2016ರಲ್ಲಿ ಅದರ ಸೇನಾ ವೆಚ್ಚದಲ್ಲಿ ಶೇ.5.6 ರಷ್ಟು ಹೆಚ್ಚಳವಾಗಿದೆ. 2017ರಲ್ಲಿ ಚೀನಾವು ಮಿಲಿಟರಿಗಾಗಿ 228 ಶತಕೋಟಿ ಡಾಲರ್ ವ್ಯಯಿಸಿದ್ದು, ಏಶ್ಯದ ಅತ್ಯಧಿಕ ರಕ್ಷಣಾ ವೆಚ್ಚದ ದೇಶವೆನಿಸಿದೆ.
ಭಾರತ ಹಾಗೂ ಚೀನಾದ ನಡುವಿನ ಸೇನಾ ಉದ್ವಿಗ್ನತೆಯು ಭಾರತಕ್ಕೆ ಸೇನಾ ವೆಚ್ಚವನ್ನು ಅಧಿಕ ಗೊಳಿಸಲು ಪ್ರೇರೇಪಿಸಿದೆಯೆಂದು ಎಸ್‌ಐಪಿಆರ್‌ಐನ ಹಿರಿಯ ಸಂಶೋಧಕ ಸಿಮೆನ್ ವೆಝೆಮ್ಯಾನ್ ಹೇಳಿದ್ದಾರೆ.
‘‘ಚೀನಾ ಹಾಗೂ ನೆರೆಹೊರೆಯ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯು ಏಶ್ಯದಲ್ಲಿ ಮಿಲಿಟರಿ ವೆಚ್ಚದಲ್ಲಿ ಏರಿಕೆಯು ಮುಂದುವರಿಯಲು ಕಾರಣವಾಗಿದೆಯೆಂದು’’ ಅವರು ವರದಿಯಲ್ಲಿ ತಿಳಿಸಿದ್ದಾರೆ.
2017ರಲ್ಲಿ ಸೌದಿ ಆರೇಬಿಯಾ ಸೇನೆಗಾಗಿ ಅತ್ಯಧಿಕ ವೆಚ್ಚ ಮಾಡಿದ ದೇಶವಾಗಿದ್ದು, ಅದು 69.4 ಶತಕೋಟಿ ಡಾಲರ್ ವ್ಯಯಿಸಿದೆ. 2016ರಲ್ಲಿ ಸೌದಿಯ ಮಿಲಿಟರಿ ವೆಚ್ಚ 66.3 ಶತಕೋಟಿ ಡಾಲರ್‌ಗಳಾಗಿತ್ತು.
ಆದಾಗ್ಯೂ ಕಳೆದ ವರ್ಷ ರಶ್ಯದ ಸೇನಾ ವೆಚ್ಚವು 66.3 ಶತಕೋಟಿ ಡಾಲರ್‌ಗಳಾಗಿದ್ದು, ಇದು 2016ಕ್ಕಿಂತ ಶೇ.20ರಷ್ಟು ಕಡಿಮೆಯಿಂದ ವರದಿ ಸಮಾಧಾನ ವ್ಯಕ್ತಪಡಿಸಿದೆ.
ಒಟ್ಟಾರೆಯಾಗಿ, 2016ಕ್ಕಿಂತ ಕಳೆದ ವರ್ಷದಲ್ಲಿ ಜಾಗತಿಕ ಮಿಲಿಟರಿ ವೆಚ್ಚದಲ್ಲಿ ಶೇ.1.1ರಷ್ಟು ಏರಿಕೆಯಾಗಿದ್ದು, 1739 ಶತಕೋಟಿ ಡಾಲರ್‌ನಷ್ಟಾಗಿದೆಯೆಂದು ವರದಿಯು ತಿಳಿಸಿದೆ.