×
Ad

ಪಾಕ್ ಜೈಲಿನಲ್ಲಿದ್ದ ಅನಾರೋಗ್ಯ ಪೀಡಿತ ಭಾರತೀಯ ಕೈದಿಯ ಬಿಡುಗಡೆ

Update: 2018-05-04 22:48 IST

ಕರಾಚಿ,ಮೇ4: ಕಳೆದ ನಾಲ್ಕು ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಖೈದಿ 20 ವರ್ಷದ ಯುವಕ ಜಿತೇಂದ್ರ ಅರ್ಜುನ್‌ವಾರ್, ತೀವ್ರವಾಗಿ ಅನಾರೋಗ್ಯ ಪೀಡಿತರಾಗಿರುವುದರಿಂದ ಮಾನವೀಯ ನೆಲೆಯಲ್ಲಿ ಅತನನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಪಾಕ್ ಸರಕಾರ ತಿಳಿಸಿದೆ.

ತಲಸ್ಸೆಮಿಯಾ ರೋಗದಿಂದ ನರಳುತ್ತಿರುವ ಅರ್ಜುನ್‌ವಾರ್ 2013ರಲ್ಲಿ ತನ್ನ ಕುಟುಂಬಿಕರೊಂದಿಗೆ ಜಗಳವಾಡಿದ ಬಳಿಕ ಮನೆಬಿಟ್ಟ ಬಳಿಕ ತನಗೆ ಅರಿವಿಲ್ಲದೆ ಪಾಕಿಸ್ತಾನದ ಗಡಿ ಪ್ರವೇಶಿಸಿದ್ದನೆನ್ನಲಾಗಿದೆ.

ಶುಕ್ರವಾರ ಮುಂಜಾನೆ ಅರ್ಜುನ್‌ವಾರ್‌ರನ್ನು ಬಿಡುಗಡೆಗೊಳಿಸಲಾಗಿದ್ದು, ಆತನನ್ನು ಲಾಹೋರ್‌ಗೆ ವಿಮಾನದಲ್ಲಿ ಕಳುಹಿಸಲಾಗಿದೆ. ಅಲ್ಲಿಂದ ಅವರನ್ನು ವಾಘಾ ಗಡಿಗೆ ಕೊಂಡೊಯ್ದು, ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದೆಂದು ಜಿಯೋ ಸುದ್ದಿಸಂಸ್ಥೆ ವರದಿ ಮಾಡಿದೆ. ಅರ್ಜುನ್‌ವಾರ್‌ನನ್ನು 2014ರಲ್ಲಿ ಪಾಕ್ ಬಂಧಿಸಿತ್ತಾದರೂ, ಭಾರತವು ಆತನ ಪೌರತ್ವವನ್ನು ಕಳೆದ ವರ್ಷವಷ್ಟೇ ದೃಢಪಡಿಸಿತ್ತು.

ಪಾಕಿಸ್ತಾನದ ಖ್ಯಾತ ಮಾನವಹಕ್ಕುಗಳ ಕಾರ್ಯಕರ್ತ ಶೆಹಝಾದ್ ರಾಯ್ ಅವರ ಪ್ರಯತ್ನದಿಂದಾಗಿ ಅರ್ಜುನ್‌ವಾರ್ ತನ್ನ ತಾಯ್ನಾಡಿಗೆ ವಾಪಸಾಗುವಲ್ಲಿ ಸಫಲನಾಗಿದ್ದಾರೆಂದು ಜಿಯೋ ನ್ಯೂಸ್ ಹೇಳಿದೆ. ಈ ವರ್ಷದ ಜನವರಿಯಲ್ಲಿ ಪಾಕ್ ಸರಕಾರವು ಸದ್ಭಾವನೆಯ ಕ್ರಮವಾಗಿ 147 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News