ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಸುಳ್ಳು ಸುದ್ದಿ: ಮಂಕಾಳ ವೈದ್ಯರಿಂದ ದೂರು

Update: 2018-05-04 17:19 GMT

ಭಟ್ಕಳ, ಮೇ 4: ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಯ ಬಿಡುತ್ತಿದ್ದು, ನ್ಯಾಯ ಸಮ್ಮತವಾದ ಮತದಾನಕ್ಕೆ ಇದರಿಂದ ತೊಂದರೆಯಾಗಿದೆ ಎಂದು ಶಾಸಕ ಮಂಕಾಳ ವೈದ್ಯ ಮುರ್ಡೇಶ್ವರ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ.

ಪ್ರಥಮ ದೂರಿನಲ್ಲಿ ಕರಾವರಿ ಗ್ರೂಫ್ಸ್ ಮತ್ತು ಬ್ರಹ್ಮಶ್ರೀ ಎನ್ನುವ ಸಾಮಾಜಿಕ ಜಾಲ ತಾಣಗಳಲ್ಲಿ ತಂಜೀಮ್ ಬೇಡಿಕೆ ಹೈಟೆಕ್ ಖಸಾಯಿಖಾನೆಗೆ ಪರ ವಾನಿಗೆ ನೀಡುವುದಾಗಿ ಶಾಸಕರ ಒಪ್ಪಂದ ಎನ್ನುವುದಾಗಿ ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತಿದ್ದು ಇದರಿಂದ ಭಟ್ಕಳ ಮತದಾರ ಕ್ಷೇತ್ರದಲ್ಲಿ ನ್ಯಾಯ ಯುತವಾದ ಮತದಾನ ಆಗಲು ಅಡ್ಡಿಯಾಗುತ್ತಿದ್ದು ಇಂತಹ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ.

ಇನ್ನೊಂದು ದೂರಿನಲ್ಲಿ ಯಾವುದೋ ಕ್ಷೇತ್ರದ ಅಭ್ಯರ್ಥಿಯೋರ್ವರ ಹೇಳಿಕೆಯು ಪ್ರಜಾ ಟಿ.ವಿ.ಯಲ್ಲಿ ಬಂದಿರುವುದನ್ನು ದುರುದ್ದೇಶದಿಂದ ತಿದ್ದುಪಡಿ ಮಾಡಿ ನಾನು ಕೇವಲ ಮುಸ್ಲಿಂ ಮತಗಳಿಂದ ಗೆಲ್ಲ ಬಲ್ಲೆ ಎಂತಲೂ, ನನಗೆ ಮುಸ್ಲಿಂ ಮತಗಳು ಮಾತ್ರ ಸಾಕು ಎಂತಲೂ ಬರೆದು ಅದರ ಕೆಳಗೆ ನನ್ನ ಹೆಸರನ್ನು ಎಡಿಟ್ ಮಾಡಿ ಸಾಮಾಜಿ ಜಾಲ ತಾಣಗಳಾದ ವಡನಾಡಿಗಳು ಮತ್ತು ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರ ಇವುಗಳಲ್ಲಿ ಪ್ರಸಾರ ಮಾಡುತ್ತಿದ್ದು ಇದೂ ಕೂಡಾ ನ್ಯಾಯ ಸಮ್ಮತ ಚುನಾವಣೆಗೆ ಧಕ್ಕೆಯಾಗುವುದಿದ್ದು ಸೂಕ್ತ ಕ್ರಮ ಜರುಗಿಸಬೇಕು ಎಂದೂ ಕೋರಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಮುರ್ಡೇಶ್ವರ ಪೊಲೀಸರು ಜಾಲ ತಾಣಗಳನ್ನು ಜಾಲಾಡಲು ಆರಂಭಿಸಿರುವುದಾಗಿ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News