×
Ad

ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಪ್ರಕರಣ: ಇಮ್ರಾನ್ ಖಾನ್ ದೋಷಮುಕ್ತಿ

Update: 2018-05-04 22:51 IST

ಇಸ್ಲಾಮಾಬಾದ್,ಮೇ 4: 2014ರಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು, ಪಾಕ್‌ನ ಪ್ರತಿಪಕ್ಷ ನಾಯಕ ಇಮ್ರಾನ್ ಖಾನ್‌ರನ್ನು ಶುಕ್ರವಾರ ದೋಷಮುಕ್ತಿಗೊಳಿಸಿದೆ.

  2013ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಅಕ್ರಮ ನಡೆದಿದೆಯೆಂದು ಆರೋಪಿಸಿ ಇಮ್ರಾನ್‌ಖಾನ್ ಅವರ ತೆಹ್ರೆಕೆ ಇನ್ಸಾಫ್ ಹಾಗೂ ತಾಹಿರುಲ್ ಖಾದ್ರಿ ನೇತೃತ್ವದ ಪಾಕಿಸ್ತಾನ್ ಅವಾಮಿ ತೆಹ್ರಿಕ್ ಪಕ್ಷಗಳ ಕಾರ್ಯಕರ್ತರು ಲಾಹೋರ್‌ನಲ್ಲಿ ಬೃಹತ್ ರ್ಯಾಲಿ ನಡೆದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯನ್ನು ಥಳಿಸಲಾಗಿತ್ತು.

   2014ರ ಜೂನ್‌ನಲ್ಲಿ ಲಾಹೋರ್‌ನಲ್ಲಿ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ 14 ಮಂದಿ ಮೃತಪಟ್ಟು 100ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆಯ ನ್ನು ಖಂಡಿಸಿಯೂ ಅವರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ಖಾದ್ರಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಕಾರರ ಮೇಲೆ ಘರ್ಷಣೆ ನಡೆದಾಗ ಮಧ್ಯಪ್ರವೇಶಿಸಲು ಯತ್ನಿಸಿದ ಇಸ್ಲಾಮಾಬಾದ್‌ನ ಹಿರಿಯ ಪೊಲೀಸ್ ಅಧೀಕ್ಷಕ ಅಸ್ಮತುಲ್ಲಾ ಜುನೆಜೊ ಅವರನ್ನು ಹಿಗ್ಗಾಮಗ್ಗಾ ಥಳಿಸಲಾಗಿತ್ತು. ಈ ಪ್ರಕರಣದಲ್ಲಿ ಇಮ್ರಾನ್ ಖಾನ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

 ಇಂದು ಪ್ರಕರಣದ ತೀರ್ಪು ಹೊರಬಿದ್ದಿದ್ದು, ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಶಾರುಖ್ ಅರ್ಜುಮಂಡ್ ಅವರು ಇಮ್ರಾನ್ ಖಾನ್ ಅವರು ನಿರ್ದೋಷಿಯೆಂದು ಪರಿಗಣಿಸಿ, ದೋಷಮುಕ್ತಗೊಳಿಸಿದ್ದಾರೆ.

ತೀರ್ಪು ಘೋಷಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಇಮ್ರಾನ್ ಖಾನ್ ಆನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ, ಇದೊಂದು ಸರಳವಾದ ಪ್ರಕರಣವಾಗಿದ್ದು, ಅದನ್ನು ಭಯೋತ್ಪಾದನಾ ವಿರೋಧಿ ನ್ಯಾಯಾಲಯಕ್ಕೆ ಕಳುಹಿಸುವ ಅಗತ್ಯವಿರಲಿಲ್ಲವೆಂದರು.

ಆದಾಗ್ಯೂ ತೀರ್ಪಿನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ದೇಶದ ಜನತೆಯ ಹಕ್ಕುಗಳಿಗಾಗಿ ಹಾಗೂ ಭ್ರಷ್ಟಾಚಾರದ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News