×
Ad

94ಸಿಯಲ್ಲಿ ಮಂಜೂರಾದ ಜಾಗ ಅತಿಕ್ರಮಣ ಆರೋಪ, ತೆರವುಗೊಳಿಸದಿದ್ದಲ್ಲಿ ಪ್ರತಿಭಟನೆ: ದಲಿತ್ ಸೇವಾ ಸಮಿತಿ

Update: 2018-05-04 22:52 IST

ಪುತ್ತೂರು, ಮೇ 4: ದಲಿತ ಕುಟುಂಬವೊಂದಕ್ಕೆ ಸರ್ಕಾರದ 94ಸಿ ಕಾಯಿದೆಯ ಅಡಿಯಲ್ಲಿ ಮಂಜೂರಾಗಿರುವ ಜಾಗವನ್ನು ಪಂಚಾಯತ್ ಅಧಿಕಾರಿಗಳು ಬೇಲಿ ಹಾಕುವ ಮೂಲಕ ವಶಕ್ಕೆ ಪಡೆದುಕೊಂಡಿದ್ದು, ಈ ಜಾಗದಲ್ಲಿ ಅತಿಕ್ರಮಣ ಪ್ರಕಟಣಾ ಪಲಕ ಅಳವಡಿಸಿರುವ ಬಗ್ಗೆ ಆರೋಪ ವ್ಯಕ್ತವಾಗಿದ್ದು, ಬೇಲಿ ಮತ್ತು ಫಲಕ ತೆರವುಗೊಳಿಸುವಂತೆ ಶುಕ್ರವಾರ ಪುತ್ತೂರು ಉಪವಿಭಾಗಾದ ಉಪವಿಭಾಗಾಧಿಕಾರಿಗಳಿಗೆ ಹಾಗೂ ತಾಲೂಕು ತಹಶೀಲ್ದಾರರಿಗೆ ದೂರು ನೀಡಲಾಗಿದೆ.

ಮುಂಡೂರು ಪಂಚಾಯತ್‌ನ ಮುಂಡೂರು ಗ್ರಾಮದ ಕಂಪ ನಿವಾಸಿ ದಲಿತ ಸಮುದಾಯಕ್ಕೆ ಸೇರಿದ ಗಿರೀಶ್ ಎಂಬವರ ಮನೆಯ ಮುಂಭಾಗದಲ್ಲಿ ಪಂಚಾಯತ್ ವತಿಯಿಂದ ಬೇಲಿ ಅಳವಡಿಸಲಾಗಿದೆ. ಇದರಿಂದಾಗಿ ಮನೆ ಮಂದಿ ಹೊರ ಬರುವುದಕ್ಕೆ ತಡೆಯುಂಟಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಲಿಖಿತ ದೂರು ನೀಡಿರುವ ಗಿರೀಶ್ ಅವರು ಪತ್ನಿ ನಳಿನಿ ಅವರು ಮುಂಡೂರು ಗ್ರಾಮದ ಸರ್ವೆ ನಂಬ್ರ 150ರ ಪೈಕಿ 0.5 ಸೆಂಟ್ಸ್ ಜಾಗ ನನಗೆ 94ಸಿ ಕಾಯ್ದೆಯಡಿ ಮಂಜೂರು ಆಗಿತ್ತು. ಈ ಜಾಗದಲ್ಲಿ ವಾಸ್ತವ್ಯದ ಮನೆಯೂ ಇದೆ. ಕಳೆದ ಸೋಮವಾರ ಬೆಳಿಗ್ಗೆ ಮುಂಡೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಖಾಸಗಿ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಅಂಗಳದಲ್ಲಿ ತಂತಿ ಬೇಲಿ ,ಕಲ್ಲಗಳನ್ನು ಅಳವಡಿಸಿ ಮನೆಗೆ ಹೋಗುವರೇ ಅಡ್ಡಿ ಪಡಿಸಿದ್ದಾರೆ. ಮನೆಯಿಂದ ಹೊರಗೆ ಇರುವ ಶೌಚಾಲಯ,ಬಚ್ಚಲು ಮನೆಗೆ ಹೋಗದಂತೆ ತಡೆ ಮಾಡಿದ್ದಾರೆ. ಮುಂಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಈ ಕೃತ್ಯ ಎಸಗುವ ಮೂಲಕ ಕರ್ತವ್ಯ ಲೋಪವೆಸಗಿದ್ದು, ನಮ್ಮ ಜಾಗವನ್ನು ಅತಿಕ್ರಮಿಸಿ ಅಳವಡಿಸಿರುವ ತಂತಿ ಬೇಲಿಯನ್ನು ತೆರವು ಗೊಳಿಸಿ ಕೊಡಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ತೆರವುಗೊಳಿಸದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ

ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ತಾಲೂಕು ಅಧ್ಯಕ್ಷ ರಾಜು ಹೊಸ್ಮಠ, ಉಪಾಧ್ಯಕ್ಷ ಮನೋಹರ್ ಕೋಡಿಜಾಲು, ಸಂಘಟನೆಯ ಪ್ರಮುಖರಾದ ಕೇಶವ ಪಡೀಲು,ಆನಂದ ಕೌಡಿಚ್ಚಾರು,ಗಣೇಶ್ ಪಡೀಲು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶಿಷ್ಟ ಪಂಗಡದ ನಳಿನಿ ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಅಧಿಕಾರಿಗಳು ಮಾಡದಿದ್ದಲ್ಲಿ ಮುಂದಿನ ತಿಂಗಳು ಮುಂಡೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ್ ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ರಾಜು ಹೊಸ್ಮಠ ಅವರು ಎಚ್ಚರಿಸಿದ್ದಾರೆ.

ತಂತಿ ಬೇಲಿ ನಿರ್ಮಿಸಿರುವ ಸ್ಥಳದ ಪಕ್ಕದಲ್ಲಿ "ಈ ಸೊತ್ತು ಮುಂಡೂರು ಗ್ರಾಮ ಪಂಚಾಯತ್‌ಗೆ ಸೇರಿದ್ದಾಗಿದ್ದು ,ಅತಿಕ್ರಮಣ ನಿಷೇಧಿಸಲಾಗಿದೆ ’ ಎಂಬ ಪ್ರಕಟಣಾ ಫಲಕ ಅಳವಡಿಸಲಾಗಿದೆ.

ಈ ಸ್ಥಳವು ನಿವೇಶನ ರಹಿತರಿಗೆ ಮೀಸಲಾಗಿರಿಸಲಾಗಿದ್ದು, ಸರ್ವೇಯರ್ ಮೂಲಕ ಸ್ಥಳ ಅಳತೆ ಮಾಡಿಸಿ ನಳಿನಿ ಅವರಿಗೆ 94ಸಿಯಲ್ಲಿ ನೀಡಲಾದ 5 ಸೆಂಟ್ಸ್ ಜಾಗವನ್ನು ಹೊರತುಪಡಿಸಿ ಬೇಲಿ ಹಾಕಲಾಗಿದೆ. ಉಳಿದ ಸ್ಥಳದಲ್ಲಿ 8 ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಲಾಗುವುದು. ಇಲ್ಲಿ ನಿವೇಶನ ಮಂಜೂರುಗೊಳಿಸುವ ಬಗ್ಗೆ ಜನವರಿಯಲ್ಲಿ ನಡೆದ ಗ್ರಾ.ಪಂ. ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ನಳಿನಿ ಅವರ ಸ್ಥಳವನ್ನು ಬಿಟ್ಟು ಉಳಿದ ಸ್ಥಳಗಳ ಅತಿಕ್ರಮಣ ನಡೆಯದಂತೆ ತಂತಿ ಬೇಲಿ ಹಾಕಲಾಗಿದ್ದು, ಸೂಚನಾ ಫಲಕ ಅಳವಡಿಸಲಾಗಿದೆ. ನಳಿನಿ ಅವರಿಗೆ ಮಂಜೂರುಗೊಂಡ ಸ್ಥಳದಲ್ಲಿ ಯಾವುದೇ ಬೇಲಿ ನಿರ್ಮಿಸಲಾಗಿಲ್ಲ
- ಸುಜಾತ ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News