ಮೊಯ್ದಿನ್ ಬಾವ ಕೋಮು, ವ್ಯಾಪಾರಿ ರಾಜಕಾರಣದ ನಿರ್ಲಜ್ಜತೆ ಮೆರೆಯುತ್ತಿದ್ದಾರೆ : ಮುನೀರ್ ಕಾಟಿಪಳ್ಳ
ಮಂಗಳೂರು, ಮೇ 4: ತನ್ನ ವ್ಯಾಪಾರಿ ಬುದ್ಧಿಯಿಂದ ಐದು ವರ್ಷಗಳ ಕಾಲ ಬಿಜೆಪಿ ಮತ್ತು ಸಂಘ ಪರಿವಾರದಿಂದಿಗೆ ಒಳ ಒಪ್ಪಂದ ಮಾಡಿಕೊಂಡು ಆಡಳಿತ ನಡೆಸಿದ ಶಾಸಕ ಮೊಯ್ದಿನ್ ಬಾವಾ ಕೋಮುಶಕ್ತಿಗಳನ್ನು ಸೋಲಿಸಲಿಕ್ಕಾಗಿ ಜಾತ್ಯತೀತರು ಮತ್ತು ಮುಸಲ್ಮಾನರು ಐಕ್ಯತೆಯಿಂದ ಕಾಂಗ್ರೆಸ್ಸಿಗೆ ಮತ ಚಲಾಯಿಸಬೇಕು, ಸಿಪಿಐಎಂಗೆ ಮತ ಚಲಾಯಿಸಿದರೆ ಬಿಜೆಪಿ ಬರುತ್ತದೆ ಎಂದು ಭಾಷಣ ಬಿಗಿಯುತ್ತಿದ್ದಾರೆ. ಇದು ಅವರ ಸೋಗಲಾಡಿ ರಾಜಕಾರಣವನ್ನು ಎತ್ತಿ ತೋರಿಸುತ್ತದೆ. ಮುಸ್ಲಿಂ ಸಮುದಾಯದ ಹೆಸರಿನಲ್ಲಿ ಟಿಕೆಟ್ ಗಿಟ್ಟಿಸಿ ಶಾಸಕರಾದ ಮೊಯ್ದಿನ್ ಬಾವ ಅಮಾಯಕ ಮುಸ್ಲಿಂ ಮೌಲ್ವಿ ಗಫೂರ್ ರನ್ನು ಹತ್ಯೆಗೈದ ಕೊಲೆ ಆರೋಪಿಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಮಾದರಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಈ ಮೂಲಕ ಕ್ರಿಮಿನಲ್ ಗಳ ತಂಡ ಕಟ್ಟಿಕೊಂಡು ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಇಂಥವರಿಂದ ಕೋಮುವಾದದ ವಿರುದ್ಧ ಹೋರಾಟವೂ ಸಾಧ್ಯವಿಲ್ಲ, ಅಲ್ಪಸಂಖ್ಯಾತ ಮುಸ್ಲಿಮರ ಹಿತರಕ್ಷಣೆಯೂ ಸಾಧ್ಯವಿಲ್ಲ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಪಂಜಿಮೊಗರು ಚುನಾವಣಾ ಪ್ರಚಾರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಮೌಲ್ವಿ ಹಂತಕರ ಬಹಿರಂಗ ಸೇರ್ಪಡೆಯೇ ಮೊಯ್ದಿನ್ ಬಾವರ ಕೋಮು ಮತ್ತು ವ್ಯಾಪಾರಿ ರಾಜಕಾರಣದ ನಿರ್ಲಜ್ಜತೆಯನ್ನು ಎತ್ತಿ ತೋರಿಸುತ್ತದೆ. ಈ ಮೂಲಕ ಮೊಯ್ದಿನ್ ಬಾವರ ನಿಜ ಬಣ್ಣ ಎಲ್ಲರಿಗೂ ತಿಳಿದಂತಾಗಿದೆ. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಗಳಿಗೆ ಈ ಕ್ಷೇತ್ರದಲ್ಲಿ ಸೋಲು ಖಚಿತ. ಈ ಎಲ್ಲ ರಾಜಕೀಯದ ಆಟಗಳನ್ನು ಜನತೆ ಗಮನಿಸುತ್ತಿದ್ದು, ಈ ಬಾರಿ ಸಿಪಿಐಎಂ ಅಭ್ಯರ್ಥಿಗೆ ಖಂಡಿತವಾಗಿಯೂ ಮತ ನೀಡುತ್ತಾರೆ, ನನ್ನನ್ನು ಗೆಲ್ಲಿಸುತ್ತಾರೆ ಎಂಬ ಆತ್ಮವಿಶ್ವಾಸ ನನಗಿದೆ” ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಪಂಜಿಮೊಗರು ಜೋಡಿಕೊಲೆಯ ಶಂಕಿತ ಆರೋಪಿಗಳ ಮಂಪರು ಪರೀಕ್ಷೆಗೆ ಉಚ್ಚನ್ಯಾಯಾಲಯ ಅನುಮತಿ ನೀಡಿದ್ದರೂ ಕನಿಷ್ಠ ಮಂಪರು ಪರೀಕ್ಷೆ ಕೂಡಾ ಮಾಡಿಸಲಾಗದ ಶಾಸಕ ಇಡಿ ಕ್ಷೇತ್ರದ ಜನಸಾಮಾನ್ಯರಿಗೆ ನ್ಯಾಯ ದೊರಕಿಸಲು ಹೇಗೆ ಸಾಧ್ಯ?” ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದರು. ಈ ಎಲ್ಲ ಪ್ರಶ್ನೆಗಳಿಗೆ ಜನತೆ ಚುನಾವಣೆಯಲ್ಲಿ ನಿರ್ಣಾಯಕವಾಗಿ ಮತ ಚಲಾಯಿಸುವ ಮೂಲಕ ನೈಜ ಜಾತ್ಯತೀತ ಪಕ್ಷ ಸಿಪಿಐಎಂನಿಂದ ಸ್ಪರ್ಧಿಸುವ ತನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ನಗರಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ಬಿಕೆ ಇಮ್ತಿಯಾಜ್, ಮನೋಜ್ ವಾಮಂಜೂರು, ಭರತ್ ಶೆಟ್ಟಿ, ಅನಿಲ್ ಡಿಸೋಜ, ಆನಂದ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.