ಬಡಗಿನ ಹಿರಿಯ ಮದ್ದಳೆಗಾರ ಹಿರಿಯಡ್ಕ ಗೋಪಾಲರಾವ್‌ಗೆ ಸಾಮಗ ಪ್ರಶಸ್ತಿ
ಮಂಗಳೂರು, ಮೇ 4: ನಗರದ ಕಲ್ಕೂರ ಪ್ರತಿಷ್ಠಾನ (ರಿ) ನೀಡುವ ಯಕ್ಷ ದಿಗ್ಗಜ ಮಲ್ಪೆಶಂಕರನಾರಾಯಣ ಸಾಮಗ (ದೊಡ್ಡ ಸಾಮಗ) ಸ್ಮಾರಕ ಸಾಮಗ ಪ್ರಶಸ್ತಿಗೆ ಬಡಗುತಿಟ್ಟು ಯಕ್ಷಗಾನ ಕ್ಷೇತ್ರದ ಹಿರಿಯ ಮದ್ದಳೆಗಾರ ಹಿರಿಯಡ್ಕ ಗೋಪಾಲರಾವ್ ಆಯ್ಕೆಗೊಂಡಿದ್ದಾರೆ.
ಆಯುರ್ವೇದ ವೈದ್ಯಕೀಯದಲ್ಲೂ ಪರಿಣತಿಯನ್ನು ಹೊಂದಿರುವ ಗೋಪಾಲ ರಾವ್ ಮದ್ದಳೆವಾದನವನ್ನು ಅಭ್ಯಸಿಸುವ ಮೂಲಕ ಬಹಳ ಎತ್ತರಕ್ಕೆ ಏರಿದ್ದರು. ಕುಣಿತ ಹಾಗೂ ಮದ್ದಳೆಯ ಪಾಠವನ್ನು ಕಲಿತುಕೊಂಡ ರಾಯರು 1934ರಲ್ಲಿ ವಿಠಲಹೆಗಡೆಯವರ ನೇತೃತ್ವದ ಹಿರಿಯಡ್ಕ ಮೇಳವನ್ನು ಸೇರಿಕೊಂಡರು. ಪೆರ್ಡೂರು ಮೇಳ, ಅಮೃತೇಶ್ವರಿ ಮೇಳದಲ್ಲೂ ಮದ್ದಳೆಗಾರರಾಗಿದ್ದ ಗೋಪಾಲರಾಯರು ಮಂದಾರ್ತಿ ಮೇಳವೊಂದರಲ್ಲೇ ನಿರಂತರ 27 ವರ್ಷಗಳ ತಿರುಗಾಟವನ್ನೂ ನಡೆಸಿ ಸ್ವಯಂ ನಿವೃತ್ತಿ ಪಡೆದರು.
ಡಾ.ಶಿವರಾಮ ಕಾರಂತರ ಒಡನಾಟವನ್ನು ಹೊಂದಿದ್ದ ಗೋಪಾಲರಾಯರು ಅವರೊಂದಿಗೆ ವಿದೇಶದಲ್ಲೂ ತಮ್ಮ ಪ್ರತಿಭೆಯನ್ನು ಮೆರೆದಿದ್ದರು. ಏರುಮದ್ದಳೆಯ ಆವಿಷ್ಕಾರ ಬಡಗುತಿಟ್ಟಿಗೆ ಗೋಪಾಲರಾಯರ ಮಹತ್ವದ ಕೊಡುಗೆಯಾಗಿದೆ. ಅವರ ಕಲಾಸೇವೆಗೆ ಕರ್ನಾಟಕ ರಾಜ್ಯ ಸಂಗೀತ ಅಕಾಡಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿ ಸಹಿತ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಂಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.