×
Ad

​ಪ್ರಧಾನಿ ಮೋದಿ ಸಹಿತ ಬಿಜೆಪಿ ನಾಯಕರಿಂದ ದಲಿತರ ಬಗ್ಗೆ ಮೊಸಳೆ ಕಣ್ಣೀರು

Update: 2018-05-05 13:30 IST

ಮಂಗಳೂರು, ಮೇ 5: ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿಯ ನಾಯಕರು ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯೆ ಕುಮಾರಿ ಸೆಲ್ಜಾ ಆರೋಪಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು ದಲಿತರ ಬಗ್ಗೆ ಪ್ರಧಾನಿ ಮೋದಿ ಸಹಿತ ಬಿಜೆಪಿ ನಾಯಕರು ಹೇಳುವುದೊಂದು, ಮಾಡುವುದು ಇನ್ನೊಂದಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅಪಾರ ಗೌರವವಿದೆ ಎಂದು ಬಿಜೆಪಿಗರು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಅವರಿಗೆ ದಲಿತರ ಬಗ್ಗೆ ಗೌರವವೇ ಇಲ್ಲ. ದಲಿತರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೊರಡಿಸಿದ ತೀರ್ಪು ಇದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಮತ್ತು ಕೇಂದ್ರ ಸರಕಾರ ಸಕಾಲಕ್ಕೆ ಸ್ಪಂದಿಸಿದ್ದರೆ ಸುಪ್ರೀಂ ಕೋರ್ಟ್‌ನಿಂದ ಇಂತಹ ವ್ಯತಿರಿಕ್ತ ತೀರ್ಪು ಹೊರಬೀಳುತ್ತಿರಲಿಲ್ಲ ಎಂದರು.

ದೇಶಾದ್ಯಂತ ದಲಿತರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಬಜೆಟ್‌ನಲ್ಲೂ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲು ಕೇಂದ್ರದ ಎನ್‌ಡಿಎ ಮತ್ತು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಸಾಧ್ಯವಾಗುತ್ತಿಲ್ಲ. ಆರೆಸ್ಸೆಸ್ಸ್‌ನ ಅಜೆಂಡಾಗಳನ್ನು ದಲಿತರ ಮೇಲೆ ಪ್ರಯೋಗಿಸಲಾಗುತ್ತದೆ. ಬಿಜೆಪಿಯ ಆಡಳಿತ ಯಂತ್ರವೇ ದಲಿತರ ವಿರುದ್ಧವಾಗಿ ಕಾರ್ಯಾಚರಿಸುತ್ತಿವೆ ಎಂದು ಕುಮಾರಿ ಸೆಲ್ಜಾ ನುಡಿದರು.

ಉನ್ನಾವೋ ಮತ್ತು ಕಥುವಾ ಪ್ರಕರಣವನ್ನೇ ತೆಗೆದುಕೊಂಡರೆ ಈ ಬಗ್ಗೆ ಬಿಜೆಪಿಯ ನಿಲುವು ಏನು ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕಿದ್ದ ಬಿಜೆಪಿ ಮುಖಂಡರು ಮತ್ತು ಅಲ್ಲಿನ ಆಡಳಿತದ ಭಾಗವಾಗಿರುವ ಜನಪ್ರತಿನಿಧಿಗಳು ಆರೋಪಿಗಳಿಗೆ ರಕ್ಷಣೆ ಒದಗಿಸಿದ್ದರು. ಪ್ರಧಾನಿ ಮೋದಿ ಸಹಿತ ಬಿಜೆಪಿ ಮುಖಂಡರು ಒಳ್ಳೊಳ್ಳೆಯ ಘೋಷಣೆ ಕೂಗುತ್ತಾರೆಯೇ ವಿನಃ ಅದರಂತೆ ನಡೆದುಕೊಳ್ಳುವುದಿಲ್ಲ ಎಂದು ಕುಮಾರಿ ಸೆಲ್ಜಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಮಾಧ್ಯಮ ವಕ್ತಾರ ಜೈವೀರ್ ಶೆರ್ಗಿಲ್, ಮಹಾರಾಷ್ಟ್ರದ ಮಾಜಿ ಸಚಿವ ಸುರೇಶ್ ಶೆಟ್ಟಿ, ಪಕ್ಷದ ಮುಖಂಡ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News