×
Ad

ನೆಹರೂ ಮೈದಾನಕ್ಕೆ ಹರಿದು ಬಂದ ಜನ ಸಾಗರ

Update: 2018-05-05 23:32 IST

ಮಂಗಳೂರು, ಮೇ 5: ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ ಬಿಜೆಪಿ ಚುನಾವಣಾ ಸಭೆಗೆ ಶನಿವಾರ ಬೃಹತ್ ಜನಸಾಗರಕ್ಕೆ ನೆಹರೂ ಮೈದಾನ ಸಾಕ್ಷಿಯಾಯಿತು.

ಶನಿವಾರ ಅಪರಾಹ್ನದ ಬಳಿಕ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ನೆಹರೂ ಮೈದಾನ ಪ್ರವೇಶಿಸಿದ್ದರು. ಸಂಜೆ 6 ಗಂಟೆಯ ಹೊತ್ತಿಗೆ ಜನ ಸಮೂಹದಿಂದ ಮೈದಾನ ತುಂಬಿತ್ತು. ಸಂಜೆ 6:50ರ ಹೊತ್ತಿಗೆ ಪ್ರಧಾನಿ ಆಗಮನ ಆಗುತ್ತಿದ್ದಂತೆ ಮತ್ತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮೈದಾನವನ್ನು ಪ್ರವೇಶಿಸಿದರು. ನೂರಾರು ಕಾರ್ಯಕರ್ತರು ನೆಹರೂ ಮೈದಾನ ಸುತ್ತಲಿನ ಗೇಟ್ ಹತ್ತಿ ತಮ್ಮ ನೆಚ್ಚಿನ ನಾಯಕನನ್ನು ಕಂಡು ಖುಷಿಪಟ್ಟರು.

ನರೇಂದ್ರ ಮೋದಿ ಅವರ ಭಾಷಣದುದ್ದಕ್ಕೂ ಕಾರ್ಯಕರ್ತರಿಂದ ಹರ್ಷೋದ್ಘಾರ ಮೊಳಗಿದ್ದವು.

ನೆಹರೂ ಮೈದಾನ ಸುತ್ತ ಮುತ್ತ ಬಿಗಿ ಬಂದೋಬಸ್ತ್‌

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದ ಒಳಗೆ ಮತ್ತು ಹೊರಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೊಲೀಸರು ಮತ್ತು ಬಿಎಸ್‌ಎಫ್ ಜವಾನರನ್ನು ನಿಯೋಜಿಸಲಾಗಿತ್ತು. ನೆಹರೂ ಮೈದಾನ ಪ್ರವೇಶಿಸುವ ದ್ವಾರದ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿ ನರೇಂದ್ರ ಮೋದಿ ನಿರ್ಗಮನದನರೆಗೆ ಪೊಲೀಸರು ಮತ್ತು ಜವಾನರು, ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ರಸ್ತೆಗಳಲ್ಲೂ ಪೊಲೀಸ್ ಕಾವಲು

ನೆಹರೂ ಮೈದಾನ ಪ್ರವೇಶಿಸುವ ಎಲ್ಲಾ ರಸ್ತೆಗಳಲ್ಲೂ ಪೊಲೀಸರು ಮತ್ತು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆಚ್ಚಿನ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಸಂದರ್ಭದಲ್ಲಿ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಾಹನಗಳು ಹಾದು ಹೋಗುವ ಮೈದಾನ ಬಳಿಯ ಎ.ಬಿ.ಶೆಟ್ಟಿ ವೃತ್ತದಲ್ಲೂ ಹೆಚ್ಚಿನ ಪೊಲೀಸ್ ಮತ್ತು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಜನರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಾಹನ ಸಂಚಾರದಲ್ಲಿ ವ್ಯತ್ಯಯ

ಪ್ರಧಾನಿ ನರೇಂದ್ರ ಮೋದಿ ಆಗಮದ ಕೆಲವು ತಾಸು ಮುಂಚೆ ಹಂಪನಕಟ್ಟೆ ಮಾರ್ಗವಾಗಿ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಬಸ್ಸುಗಳನ್ನು ಎ.ಬಿ.ಶೆಟ್ಟಿ ವೃತ್ತದಲ್ಲಿ ತಡೆದ ಪೊಲೀಸರು ಫಿಝಾ ಮಾಲ್ ಮಾರ್ಗವಾಗಿ ಸೈಂಟ್ ಆ್ಯನ್ಸ್ ಶಾಲೆ ಮೂಲಕ ಸ್ಟೇಟ್‌ಬ್ಯಾಂಕ್ ಪ್ರವೇಶಿಸಲು ಅನುವು ಮಾಡಿಕೊಟ್ಟರು. ಕೆಲವು ಬಸ್ಸುಗಳು ತಮ್ಮ ರೂಟ್‌ಗಳನ್ನು ಬದಲಿಸಿ ಸಂಚಾರ ನಡೆಸಿದವು. ಇದರಿಂದಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಸಂಜೆ 6 ಗಂಟೆಯ ಬಳಿಕ ಸರ್ವಿಸ್ ಮತ್ತು ಸಿಟಿ ಬಸ್ಸುಗಳ ಸಂಖ್ಯೆ ವಿರಳವಾಗಿದ್ದವು.

ವಾಹನ ಪಾರ್ಕಿಂಗ್‌ಗೆ ಪರದಾಡಿದ ಚಾಲಕರು

ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದರಾದರೂ ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ಪರದಾಡುಂತಾಯಿತು. ಹೆಚ್ಚಿನ ಕಡೆಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ, ಮತ್ತೆ ಕೆಲವರು ಕಟ್ಟಡಗಳ ಎದುರಿನ ಸ್ಥಳದಲ್ಲಿ ತಮ್ಮ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಿದರು. ಬಹುತೇಕ ದ್ವಿಚಕ್ರ ಸವಾರರು ರಸ್ತೆಗಳಲ್ಲಿನ ಫುಟ್‌ಪಾತ್‌ಗಳ ಮೇಲೆಯೇ ತಮ್ಮ ವಾಹನಗಳನ್ನು ಪಾರ್ಕ್ ಮಾಡಿದ್ದರು. ನೆಹರೂ ಮೈದಾನ ಬಳಿಯ ಸೆಂಟ್ರಲ್ ರೈಲ್ವೆ ಸ್ಟೇಶನ್‌ಗೆ ಹೋಗುವ ರಸ್ತೆಯ ಫುಟ್‌ಪಾತ್‌ನಲ್ಲೇ ಹೆಚ್ಚಿನ ದ್ವಿಚಕ್ರ ವಾಹಗಳನ್ನು ಪಾರ್ಕ್ ಮಾಡಲಾಗಿತ್ತು. ರೈಲ್ವೆ ಸ್ಟೇಶನ್‌ನ ಮುಂಭಾಗದಲ್ಲಿ ಕೆಲವು ಕಾರುಗಳು ಪಾರ್ಕ್ ಮಾಡಲಾಗಿದ್ದವು. ಅಲ್ಲದೆ, ಹ್ಯಾಮಿಲ್ಟನ್ ಸರ್ಕಲ್ ಬಳಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಎದುರು, ನೆಲ್ಲಿಕಾಯಿ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಪಾರ್ಕ್ ಮಾಡಲಾಗಿದ್ದವು. ಹ್ಯಾಮಿಲ್ಟನ್ ಕಾಂಪ್ಲೆಕ್ಸ್ ಎದುರು ಹಾಗೂ ಅಲ್ಲಿಂದ ಸೈಂಟ್ ಆ್ಯನ್ಸ್ ಶಾಲಾ ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಫುಟ್‌ಪಾತ್‌ನಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News