ದ.ಕ. ಜಿಲ್ಲೆಯ ಜನತೆಗೆ ನಿರಾಸೆ, ನೋವು ತಂದಿದೆ-ದುರ್ಗಾ ಪ್ರಸಾದ್ ಕುಂಬ್ರ
ಪುತ್ತೂರು, ಮೇ 6: ಜಿಲ್ಲೆಯ ರೈತರಲ್ಲಿ ಭಯ ಮೂಡಿಸಿದ ಅಡಿಕೆ ಸಿಷೇಧ ಪ್ರಸ್ತಾಪ ಮತ್ತು ನೇತ್ರಾವತಿ ತಿರುವು ಯೋಜನೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರು ಭೇಟಿಯ ಸಂದರ್ಭದಲ್ಲಿ ಯಾವುದೇ ಹೇಳಿಕೆ ನೀಡದಿರುವುದು ಜಿಲ್ಲೆಯ ಜನತೆಗೆ ನಿರಾಸೆ ಮತ್ತು ತುಂಬಾ ನೋವು ನೀಡಿದೆ ಎಂದು ಪುತ್ತೂರಿನ ಕಾಂಗ್ರೆಸ್ ವಕ್ತಾರ ನ್ಯಾಯವಾದಿ ದುರ್ಗಾಪ್ರಸಾದ್ ಕುಂಬ್ರ ತಿಳಿಸಿದರು.
ಅವರು ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಡಿಕೆ ನಿಷೇಧ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿರುವುದರಿಂದ ಜಿಲ್ಲೆಯ ರೈತರು ಗೊಂದಲಕ್ಕೆ ಈಡಾಗಿದ್ದಾರೆ. ಅಲ್ಲದೆ ತುಮಕೂರಿನಲ್ಲಿ ನೇತ್ರಾವತಿ ಮತ್ತು ಹೇಮಾವತಿ ನದಿಗಳ ಜೋಡಣೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ ಪ್ರಧಾನಿ ಮೋದಿ ಅವರು ದ.ಕ. ಜಿಲ್ಲೆಯ ಜನತೆಗೆ ಅನ್ಯಾಯ ಎಸಗಿದ್ದಾರೆ. ನೇತ್ರಾವತಿಯನ್ನು ಉಳಿಸುವ ಬಗ್ಗೆ ಇಲ್ಲಿನ ನಾಗರಿಕರು ಪಕ್ಷ ಬೇಧವಿಲ್ಲದೆ ಹೋರಾಟ ನಡೆಸಿದ್ದಾರೆ. ಆದರೆ ಮಂಗಳೂರಿಗೆ ಆಗಮಿಸಿದ ಮೋದಿ ಅವರು ಈ ಬಗ್ಗೆ ಇಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಮೋದಿ ಅಗಮನ ಜಿಲ್ಲೆಗೆ ಕರಾಳ ದಿನವಾಗಿ ಪರಿಣಮಿಸಿದೆ.
ಅಡಿಕೆ ನಿಷೇಧ ಪ್ರಸ್ತಾಪ ಮತ್ತು ನೇತ್ರಾವತಿ ಹೇಮಾವತಿ ಜೋಡಣೆಯಿಂದ ಜಿಲ್ಲೆಯ ಜನತೆಗೆ ಅನ್ಯಾಯವಾಗಲಿದೆ. ಇಲ್ಲಿನ ಜನರ ಬದುಕು ಅತಂತ್ರ ವಾಗಲಿದೆ. ಕಾಂಗ್ರೆಸ್ ಎಂದೂ ಜನರ ಭಾವನೆಗಳಿಗೆ ನೋವು ಕೊಡುವ ಕೆಲಸ ಮಾಡಿಲ್ಲ. ಇಲ್ಲಿನ ಎಲ್ಲಾ ಧರ್ಮದ ಜನರು ನೇತ್ರಾವತಿ ನೀರು ಬಳಸು ತ್ತಿದ್ದಾರೆ. ಅಡಿಕೆಯಿಂದ ಎಲ್ಲರ ಬದುಕು ನಡೆಯುತ್ತಿದೆ. ಈ ವಿಚಾರದಲ್ಲಿ ಬಿಜೆಪಿ ಧ್ವಂದ್ವ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದ ಅವರು ಚುನಾವಣೆಯಲ್ಲಿ ಬಿಜೆಪಿಯ ಈ ನಿಲುವಿಗೆ ಮತದಾರರು ಉತ್ತರ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಕೂರ್ ಹಾಜಿ, ಕಾರ್ಯದಶಿಧ ರಾಮ ನಾಯ್ಕ, ಪಕ್ಷದ ರಾಜ್ಯ ಅಲ್ಪ ಸಂಖ್ಯಾತ ಸಮಿತಿ ಸಂಯೋಜಕ ಇಸಾಕ್ ಸಾಲ್ಮರ ಉಪಸ್ಥಿತರಿದ್ದರು.