×
Ad

ಕುಂಟಲ್‌ಗುಡ್ಡೆ: ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ

Update: 2018-05-06 17:22 IST

ಬಂಟ್ವಾಳ, ಮೇ 5: ಸಜಿಪನಡು ಗ್ರಾಮದ ಕುಂಟಲ್‌ಗುಡ್ಡೆ ಪ್ರದೇಶಕ್ಕೆ ಸಂಚರಿಸಲು ಸರಿಯಾದ ಮಾರ್ಗದ ವ್ಯವಸ್ಥೆಯಿಲ್ಲ ಕಾರಣ ಇಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ಜನರು ಸಜಿಪನಡು ಗ್ರಾಮದ ನಿವಾಸಿಗಳಾಗಿದ್ದು, 1974ರ ನೆರೆ ಸಂತ್ರಸ್ತರಾದ ಇಲ್ಲಿನ ಕೆಲವೊಂದು ಕುಟುಂಬಗಳಿಗೆ ಕುಂಟಲ್‌ಗುಡ್ಡೆ ಪ್ರದೇಶದಲ್ಲಿ ಸ್ಥಳ ನೀಡಲಾಗಿತ್ತು. ಈ ಪ್ರದೇಶಕ್ಕೆ ಕೇವಲ ಕಾಲುದಾರಿಯಿದ್ದು, ರಸ್ತೆ ಸಂಪರ್ಕವಿರುವುದಿಲ್ಲ. ಇದಕ್ಕಾಗಿ 40 ವರ್ಷಗಳಿಂದ ಸಂಬಂಧಪಟ್ಟ ಜನಪ್ರತಿನಿಧಿ ಗಳಿಗೆ ಹಾಗೂ ಜಿಲ್ಲಾಧಿಕಾರಿ ಸಹಿತ ಇತರ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಚುನಾವಣೆ ಬಹಿಷ್ಕರಿಸಿ, ಇತ್ತೀಚೆಗೆ ಈ ಪ್ರದೇಶದಲ್ಲಿ ಬ್ಯಾನರೊಂದನ್ನು ಕಟ್ಟಲಾಗಿತ್ತು. ಆದರೆ, ಈ ಬಗ್ಗೆ ಮಾಹಿತಿ ಅರಿತ ಅಧಿಕಾರಿಗಳು ಬ್ಯಾನರ್ ಅನ್ನು ತೆರವುಗೊಳಿಸಿದ್ದು, ನಮ್ಮ ಪ್ರದೇಶದ ಸಮಸ್ಯೆಯ ಬಗ್ಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.

40 ವರ್ಷದ ಹೋರಾಟ: ಈ ಪ್ರದೇಶದಲ್ಲಿರುವ ಕಾಲುದಾರಿ ನಡೆಯಲು ಸೂಕ್ತವಾಗಿಲ್ಲ. ಕಾಲುದಾರಿಯುದ್ದಕ್ಕೂ ಹುಲ್ಲು ಹಾಗೂ ಗಿಡಗಂಟಿಗಳಿಂದ ಕೂಡಿದೆ. ಅಲ್ಲದೆ, ಸರಿಯಾದ ಸಂಪರ್ಕ ವಿಲ್ಲದೆ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಇದುವರೆಗೂ ಗ್ರಾಮ ಪಂಚಾಯತ್‌ಗೆ 14 ಸಲ, ಸ್ಥಳೀಯ ಶಾಸಕರಿಗೆ 10 ಸಲ, ಜಿಲ್ಲಾಧಿಕಾರಿಗಳಿಗೆ 6 ಸಲ ಹಾಗೂ ತಹಶೀಲ್ದಾರ್‌ಗೆ ಹಲವು ಸಲ ಮನವಿಯನ್ನು ಸಲ್ಲಿಸಿದರೂ, ಇಲ್ಲಿನ ಶಾಸಕರು ಸಹಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನಮ್ಮ ಸಮಸ್ಯೆಗಳಿಗೆ ಯಾವುದೇ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಹಾಗೂ ನಮ್ಮ ಮನವಿಗಳಿಗೆ ಯಾವುದೇ ಬೆಲೆಯಿರುವುದನ್ನು ಮನಗಂಡು ಚುನಾವಣೆಯನ್ನು ಬಹಿಷ್ಕಾರಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಥಳೀಯರಾದ ನೌಶಾದ್ ಎಂಬವರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಸುಮಾರು 28 ಮನೆಗಳಿವೆ. ಇಲ್ಲಿಗೆ ಮಾರ್ಗದ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ, ಇಲ್ಲಿನ ಗ್ರಾಮಸ್ಥರು ಗ್ರಾಮ ಪಂಚಾಯತ್ ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ. ಮನವಿ ಸಹಿತ ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಅಂದಿನ ಜಿಲ್ಲಾಧಿಕಾರಿ ಅವರು ಪರ್ಯಾಯ ವವಸ್ಥೆ ಕಲ್ಪಿಸುವಂತೆ ಭರವಸೆ ನೀಡಿದ್ದರೂ ಇದುವರೆಗೂ ರಸ್ತೆ ನಿರ್ಮಾಣವಾಗಿಲ್ಲ ಎಂದು ಗ್ರಾಪಂ ಅಧ್ಯಕ್ಷ ನಾಸಿರ್ ಸಜಿಪ ಅವರು ಮಾಹಿತಿ ನೀಡಿದ್ದಾರೆ. ಇನ್ನಾದರೂ ಅಧಿಕಾರಗಳಿ ಎಚ್ಚೆತ್ತುಕೊಂಡು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ, ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News