×
Ad

ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ: ರಮಾನಾಥ ರೈ

Update: 2018-05-06 17:24 IST

ಬಂಟ್ವಾಳ, ಮೇ 6: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಬಹುನಿರೀಕ್ಷಿತ ಯೋಜನೆಗಳು ಅನುಷ್ಠಾನಗೊಂಡಿದೆ. ಅಭಿವೃದ್ಧಿಯ ಪಥದಲ್ಲಿ ಬಂಟ್ವಾಳ ಕ್ಷೇತ್ರವು ಹೊಸ ಮೈಲಿಗಲ್ಲನ್ನೇ ತಲುಪಿದೆ. ಭವಿಷ್ಯದ ಮುನ್ನೋಟವನ್ನು ಗಮನದಲ್ಲಿರಿಸಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ಹೇಳಿದ್ದಾರೆ.

 ಶನಿವಾರ ರಾತ್ರಿ ಬಂಟ್ವಾಳ ತಾಲೂಕು ಸಿದ್ಧಕಟ್ಟೆಯಲ್ಲಿ ನಡೆದ ವಲಯ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದ ಅವರು, ಕಲ್ಲಡ್ಕದ ಶಾಲಾ ಮಕ್ಕಳ ಬಿಸಿಯೂಟ ನಿಲ್ಲಿಸಿದ್ದೇನೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ದೇವಸ್ಥಾನದ ಹಣ ದೇವಸ್ಥಾನಕ್ಕೇ ವಿನಿಯೋಗವಾಗಬೇಕು. ಶಿಕ್ಷಣ ಇಲಾಖೆಯ ಹಣ ಶಿಕ್ಷಣ ಇಲಾಖೆಗೇ ಬಳಕೆಯಾಗಬೇಕು. ಭಕ್ತರು ದೇವರ ಹುಂಡಿಗೆ ಹಾಕಿದ ಹಣವನ್ನು ಬಿಸಿಯೂಟಕ್ಕಾಗಿ ಹಣದ ರೂಪದಲ್ಲಿ ನೀಡಿದ್ದು ತಪ್ಪು. ವರ್ಷಕ್ಕೆ ದೇವಸ್ಥಾನದ 4 ಲಕ್ಷ ರೂಪಾಯಿಯನ್ನು ಉಳಿಸಿದ ಪುಣ್ಯ ಕಾರ್ಯ ನನ್ನದು ಎಂದರು.

ಮಕ್ಕಳ ಬಿಸಿಯೂಟಕ್ಕೆ ಕನ್ನ ಎಂದು ಅಪಪ್ರಚಾರ ಮಾಡಿದವರು ವಾಸ್ತವ ಅರಿತುಕೊಳ್ಳಬೇಕು. ಕಲ್ಲಡ್ಕ ಶಾಲೆಗೆ ಸರಕಾರದ ಅನ್ನಭಾಗ್ಯ ಯೋಜನೆಯಲ್ಲಿ ಬಿಸಿಯೂಟದ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದ್ದು ಅದನ್ನು ಬಳಸಿಕೊಳ್ಳದಿರುವುದು ಸರಿಯಲ್ಲ ಎಂದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ತಾಪಂ ಸದಸ್ಯೆ ಮಲ್ಲಿಕಾ ಶೆಟ್ಟಿ, ಡಿಸಿಸಿ ಉಪಾಧ್ಯಕ್ಷ ಬೇಬಿ ಕುಂದರ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್ ಮಾವಂತೂರು, ಡಾ. ಪ್ರಭಾಚಂದ್ರ, ಪ್ರಮುಖರಾದ ನಿವೃತ್ತ ಮುಖ್ಯ ಶಿಕ್ಷಕ ರಮೇಶ್ ನಾಯಕ್ ರಾಯಿ, ಮೋಹನ ಶೆಟ್ಟಿ ಪಂಜಿಕಲ್ಲು, ವಲಯ ಅಧ್ಯಕ್ಷ ಶಿವಾನಂದ ರೈ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News