ಬೆಳ್ವೆ: ರಾಜೀನಾಮೆ ನೀಡಿದ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಕುಂದಾಪುರ, ಮೇ 6: ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಕಾರ್ಯವೈಖರಿಯಿಂದ ಬೇಸತ್ತು ಶುಕ್ರವಾರ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ಬೆಳ್ವೆ- ಮಡಾಮಕ್ಕಿ ಗ್ರಾಪಂ ವ್ಯಾಪ್ತಿಯ ನೂರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರವಿವಾರ ಬೆಳ್ವೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಸಮ್ಮುಖದಲ್ಲಿ ಬಿಜೆಪಿ ಮುಖಂಡ, ಬೆಳ್ವೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಉದಯಕುಮಾರ್ ಪೂಜಾರಿ, ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ರಾಜು ಕುಲಾಲ್, ಬೆಳ್ವೆ ಗ್ರಾಪಂ ಮಾಜಿ ಸದಸ್ಯೆ ಲೋಲಾಕ್ಷಿ ಶೆಟ್ಟಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ಉದಯಕುಮಾರ್ ಪೂಜಾರಿ ಮಾತನಾಡಿ, ಬಿಜೆಪಿಯಿಂದ ಲಾಭ ಪಡೆದ ಹಾಲಾಡಿ ಜೊತೆಗಿರುವ ಹೊಗಳು ಭಟ್ಟರಿಗೆ ಮಾತ್ರ ಸಹಕಾರ ನೀಡಿ, ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದರೂ ಕ್ಷೇತ್ರದ ಅಭಿವದ್ಧಿ ಮರೀಚಿಕೆಯಾಗಿದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದು ಅವರ ಸಾಧನೆ. ಅಭಿವೃದ್ಧಿ ಶೂನ್ಯ ಮಾಜಿ ಶಾಸಕರ ಕಾರ್ಯ ವೈಖರಿಯಿಂದ ಬೇಸತ್ತು ಬೆಂಬಲಿ ಗರ ಮಾತಿನಂತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಜನ ಪರಿವರ್ತನೆ ಬಯಸಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ. ಸತೀಶ್ ಕಿಣಿ, ಜಯರಾಮ್ ಶೆಟ್ಟಿ ಸೂರ್ಗೋಳಿ ಮೊದಲಾದವರು ಉಪಸ್ಥಿತರಿದ್ದರು.