ರೋಡ್ ಶೋ ಸಿದ್ದರಾಮಯ್ಯ ಫಲಿತಾಂಶದ ನಂತರ ರೋಡ್‌ನಲ್ಲಿ: ಓಂಪ್ರಕಾಶ್ ಮಾತೂರ್
ಉಡುಪಿ, ಮೇ 6: ಈಗ ಎಲ್ಲ ಕಡೆ ರೋಡ್ ಶೋ ಮಾಡುವ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮೇ 15ರ ರಾಜ್ಯ ಚುನಾವಣಾ ಫಲಿತಾಂಶದ ನಂತರ ರೋಡ್‌ನಲ್ಲೇ ಇರಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಓಂ ಪ್ರಕಾಶ್ ಮಾತೂರ್ ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಎಲ್ಲಿ ಎಲ್ಲ ಅವಶ್ಯಕತೆ ಇದೆಯೋ ಅಲ್ಲೇಲ್ಲ ರ್ಯಾಲಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ರೋಡ್ ಶೋ ಮಾಡುತ್ತಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲೂ ರಾಹುಲ್ ಹಾಗೂ ಅಖಿಲೇಶ್ ಎಲ್ಲ ಕಡೆಗಳಲ್ಲಿ ರೋಡ್ ಶೋ ಮಾಡಿದ್ದರು. ಆದರೆ ಜನ ಅವರನ್ನು ತಿರಸ್ಕರಿಸಿದ್ದಾರೆ. ಇವರ ರೋಡ್ ಶೋಗಳಿಂದ ನಮಗೆ ಯಾವುದೇ ಚಿಂತೆ ಇಲ್ಲ ಎಂದರು.
ಕಾಂಗ್ರೆಸ್‌ಗೆ ರೋಡ್ ಶೋ ಅನಿವಾರ್ಯವಾಗಿದೆ. ಮೋದಿ ರ್ಯಾಲಿ ರಾಜ್ಯ ವ್ಯಾಪಿ ಜನಮೆಚ್ಚುಗೆ ಗಳಿಸಿದೆ. ನಮಗೆ ರೋಡ್ ಶೋಗಳ ಅಗತ್ಯ ಇಲ್ಲ. ಲಕ್ಷಾಂತರ ಜನ ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಗೆ ಜನ ಬೆಂಬಲ ದೊರೆತಿದೆ ಎಂದು ಅವರು ಹೇಳಿದರು.
ಜಿಗ್ನೇಶ್ ಮೇವಾನಿ ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಗುಜರಾತ್‌ನಲ್ಲಿ ಅವರದ್ದೇನೂ ನಡೆಯಲಿಲ್ಲ. ಬಿಜೆಪಿ ಅಭಿವೃದ್ಧಿಯ ಮಂತ್ರ ಹೇಳಿದರೆ, ಜಿಗ್ನೇಶ, ಹಾರ್ದಿಕ್, ಅಲ್ಪೇಶ್ ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜನೆ ಮಾಡುತ್ತಿದ್ದಾರೆ. ಮೋದಿಯನ್ನು ವಿಶ್ವವೇ ನಾಯಕ ಅಂತ ಒಪ್ಪಿ ಕೊಂಡಿದೆ. ಮೇ 15ರ ನಂತರ ಸಿದ್ದರಾಮಯ್ಯ, ಜಿಗ್ನೇಶ್‌ಗೆ ಗೊತ್ತಾಗುತ್ತದೆ ಜನರು ಯಾರ ಬಳಿ ಇದ್ದಾರೆಂಬುದು. ಕರ್ನಾಟಕದ ಜನತೆ ಮೋದಿಯ ಮೇಲೆ ಭರವಸೆ ಇಟ್ಟಿದ್ದಾರೆ ಎಂದರು.
ಚುನಾವಣಾ ಪೂರ್ವ ಸರ್ವೇಗಳು ಸುಳ್ಳಾಗಲಿವೆ. ಸರ್ವೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತದೆ ಎಂದು ಹೇಳುತ್ತಿದೆ. ಆದರೆ ಇದರ ನಿರ್ಣಯ ಮಾಡುವುದು ಜನರಲ್ಲವೇ. ಬಿಜೆಪಿ ಸಂಪೂರ್ಣ ಬಹುಮತದಿಂದ ಸರಕಾರ ರಚನೆ ಮಾಡಲಿದೆ ಎಂದು ಅವರು ಪತ್ರಕರ್ತ ಪ್ರಶ್ನೆಗೆ ಉತ್ತರಿಸಿದರು.