ಕಾಂಗ್ರೆಸ್‌ನಿಂದ ಬೈಂದೂರು ಕ್ಷೇತ್ರದ ಅಭಿವೃದ್ಧಿ ಕುಂಠಿತ: ಬಿ.ವೈ.ರಾಘವೇಂದ್ರ
ಕುಂದಾಪುರ, ಮೇ 6: ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿದ್ದು, ಶಾಶ್ವತ ನೀರಾವರಿ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲ್ಲಿ ಬೈಂದೂರು ಶಾಸಕರು ವಿಫಲರಾಗಿದ್ದಾರೆ ಎಂದು ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.
ಹೆಮ್ಮಾಡಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರಿನ ಸಮಗ್ರ ಅಭಿವೃದ್ಧಿಗೆ ಬಿಜೆಪಿಯನ್ನು ಗೆಲ್ಲಿಸಬೇಕು. ಈ ಮೂಲಕ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಬೇಕು. ನಮ್ಮ ಸರಕಾರದಿಂದ ಬೈಂದೂರಿನ ಪ್ರವಾಸಿ ತಾಣ ಹಾಗೂ ಬಂದರುಗಳ ಅಭಿವೃದ್ಧಿ, ಮೀನುಗಾರರ ಸಮಸ್ಯೆಗಳಿಗೆ ಪರಿಹಾರ, ಗೋಡಂಬಿ ಉದ್ಯಮಕ್ಕೆ ಉತ್ತೇಜನ ನೀಡಲು ಪ್ರಯತ್ನಿಸಲಾಗುವುದು ಎಂದರು.
ಕೇಂದ್ರ ಸರಕಾರ ಮಂಜೂರು ಮಾಡಿದ ಅನುದಾನವನ್ನು ತಮ್ಮದೇ ಎಂಬು ದಾಗಿ ಬೈಂದೂರು ಶಾಸಕರು ಬಿಂಬಿಸುತ್ತಿದ್ದಾರೆ. ಬೈಂದೂರು ತಾಲೂಕು ಎಂಬುದು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದ್ದು, ಅದಕ್ಕೆ ಬೇಕಾದ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಅ್ಯರ್ಥಿ ಬಿ.ಎಂ.ಸುಕುಮಾರ್ ಶೆಟ್ಟಿ, ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮುಖಂಡ ನವೀನಚಂದ್ರ ಶೆಟ್ಟಿ ಉಪಸ್ಥಿತರಿದ್ದರು.