ಭ್ರಷ್ಟಾಚಾರ ದೂರುಗಳ ವಿವರಗಳ ಬಹಿರಂಗಕ್ಕೆ ನಿರಾಕರಿಸಿದ ಮ.ಪ್ರ.ಮುಖ್ಯಮಂತ್ರಿ ಕಚೇರಿ

Update: 2018-05-06 15:19 GMT

ಭೋಪಾಲ,ಮೇ 6: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಕಚೇರಿಯ ಆವರಣದಲ್ಲಿ ಸ್ಥಾಪಿಸಲಾಗಿರುವ ‘ದೂರು ಪೆಟ್ಟಿಗೆ’ಗಳ ಮೂಲಕ ಸ್ವೀಕರಿಸಲಾಗಿರುವ ಭ್ರಷ್ಟಾಷಾರದ ಆರೋಪಗಳ ದೂರುಗಳ ವಿವರಗಳನ್ನು ಹಂಚಿಕೊಳ್ಳುವಂತಿಲ್ಲ ಎಂದು ರಾಜ್ಯ ಸರಕಾರವು ಆರ್‌ಟಿಐ ಕಾಯ್ದೆಯಡಿ ಉತ್ತರದಲ್ಲಿ ತಿಳಿಸಿದೆ. ಈ ವಿವರಗಳನ್ನು ಬಹಿರಂಗಗೊಳಿಸುವುದರಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿ ಈಡೇರುವಂತೆ ಕಂಡು ಬರುವುದಿಲ್ಲ ಮತ್ತು ಈ ವಿವರಗಳನ್ನು ಹಂಚಿಕೊಳ್ಳಲು ತಾನು ಬದ್ಧವಾಗಿಲ್ಲ ಎಂದು ಅದು ಹೇಳಿದೆ.

2012-18ರ ನಡುವೆ ಸ್ವೀಕರಿಸಲಾದ ಇಂತಹ ದೂರುಗಳ ವಿವರ ಮತ್ತು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿಯನ್ನು ಕೋರಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ ಅಜಯ ದುಬೆ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿದ್ದರು.

ಈ ಪೆಟ್ಟಿಗೆಗಳ ಮೂಲಕ ಸ್ವೀಕರಿಸಲಾಗಿರುವ ಹಲವಾರು ದೂರುಗಳ ಬಗ್ಗೆ ಸರಕಾರವು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪ್ರತಿಪಾದಿಸಿದ ದುಬೆ,ಸರಕಾರವು ಯಾವುದಕ್ಕೆ ಹೆದರುತ್ತಿದೆ? ಇಂತಹ ದೂರುಗಳ ಮೇಲೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ವಿವರಗಳನ್ನೇಕೆ ನೀಡುತ್ತಿಲ್ಲ? ಅದು ಏನನ್ನು ಬಚ್ಚಿಡಲು ಬಯಸುತ್ತಿದೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಮೇಲ್ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News