ನೋಟು ನಿಷೇಧ ಮತ್ತು ಜಿಎಸ್‌ಟಿಯಿಂದಾಗಿ ಸರಕಾರದ ನ್ಯಾಯಾಲಯ ವೆಚ್ಚದಲ್ಲಿ ಏರಿಕೆ

Update: 2018-05-06 15:25 GMT

ಹೊಸದಿಲ್ಲಿ,ಮೇ 6: ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಎದುರಿಸಲು ಸರಕಾರವು ವ್ಯಯಿಸುತ್ತಿರುವ ಹಣ 2011-12ರಲ್ಲಿ 11 ಕೋ.ರೂ.ಗಳಿದ್ದುದು 2017-18ನೇ ಸಾಲಿಗೆ 42.40 ಕೋ.ರೂ.ಗೇರಿದೆ ಎಂದು ಕಾನೂನು ಸಚಿವಾಲಯದ ಅಂಕಿಅಂಶಗಳು ತೋರಿಸುತ್ತಿವೆ.

 ಸರ್ವೋಚ್ಚ ನ್ಯಾಯಾಲಯದಲ್ಲಿ ಸರಕಾರವು ಕಕ್ಷಿಯಾಗಿರುವ ಪ್ರಕರಣಗಳ ಸಂಖ್ಯೆಯೂ ಕಳೆದ ಒಂದು ವರ್ಷದಲ್ಲಿ ಏರಿಕೆಯಾಗಿದ್ದು,ನೋಟು ನಿಷೇಧ,ಜಿಎಸ್‌ಟಿ ಜಾರಿ ಮತ್ತು ತೆರಿಗೆ ವಿವಾದಗಳ ಹೆಚ್ಚಳ ಇದಕ್ಕೆ ಕಾರಣವಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದರು.

ಸಂಸದೀಯ ಸಮಿತಿಗೆ ಸಲ್ಲಿಸಲಾಗಿರುವ ದತ್ತಾಂಶಗಳಂತೆ 2011-12ನೇ ಸಾಲಿನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ಪರವಾಗಿ ವಾದಿಸಲು ಕಾನೂನು ಅಧಿಕಾರಿಗಳು ಮತ್ತು ನ್ಯಾಯವಾದಿಗಳಿಗೆ ಸರಕಾರವು 10.99 ಕೋ.ರೂ.ಗಳನ್ನು ಪಾವತಿಸಿತ್ತು. ಇದು 2012-13ರಲ್ಲಿ 11.73 ಕೋ.ರೂ. ಮತ್ತು 2013-14ರಲ್ಲಿ 14.47 ಕೋ.ರೂ.ಗೇರಿತ್ತು. 2016-17ರಲ್ಲಿ ಇವೆರಡನ್ನೂ ಮೀರಿ 32.06 ಕೋ.ರೂ.ಗಳಿಗೆ ತಲುಪಿದ್ದರೆ,2017-17ರಲ್ಲಿ(ಫೆ.22ರವರೆಗೆ) 42.40 ಕೋ.ರೂ.ಆಗಿದೆ.

ಸರಕಾರವು ಹೆಚ್ಚಿನ ಕಾನೂನು ಅಧಿಕಾರಿಗಳನ್ನು ಹೊಂದಿಲ್ಲ. ಹೀಗಾಗಿ ಸೂಕ್ಷ್ಮ ಪ್ರಕರಣಗಳನ್ನು ಸಚಿವಾಲಯದ ಪಟ್ಟಿಯಲ್ಲಿರುವ ಹಿರಿಯ ನ್ಯಾಯವಾದಿಗಳೂ ನಿರ್ವಹಿಸುತ್ತಾರೆ. ಅವರಿಗೆ ಪ್ರತಿ ಹಾಜರಾತಿಗೆ ಅನುಗುಣವಾಗಿ ಶುಲ್ಕವನ್ನು ಪಾವತಿಸಲಾಗುತ್ತದೆ ಎಂದು ಅಧಿಕಾರಿಗಳು ಬೆಟ್ಟು ಮಾಡಿದ್ದಾರೆ.

 ಸಚಿವಾಲಯವು ನ್ಯಾಯವಾದಿಗಳ ಶುಲ್ಕಗಳನ್ನು 60 ದಿನಗಳಲ್ಲಿ ಪಾವತಿಸುತ್ತಿರುವುದೂ ಹೆಚ್ಚಿನ ವೆಚ್ಚ ಕಂಡುಬರಲು ಕಾರಣವಾಗಿದೆ. ಈ ಮೊದಲು ಶುಲ್ಕ ಪಾವತಿಯಾಗಲು ತಿಂಗಳುಗಟ್ಟಲೆ ಹಿಡಿಯುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News