×
Ad

ಮತದಾನ ಜಾಗೃತಿಗಾಗಿ ಮಲ್ಪೆ ಬೀಚ್‌ನಲ್ಲಿ ಹಬ್ಬದ ವಾತಾವರಣ

Update: 2018-05-06 21:59 IST

ಉಡುಪಿ, ಮೇ 6: ರಾಜ್ಯ ವಿಧಾನಸಭಾ ಚುನಾವಣೆಯ ಅಂಗವಾಗಿ ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ರವಿವಾರ ಮಲ್ಪೆ ಕಡಲ ತೀರದಲ್ಲಿ ಫೇಸ್ ಪೈಟಿಂಗ್, ಮೆಹಂದಿ, ಯಕ್ಷಗಾನ, ಮೈಮ್ ಶೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗಿದ್ದು, ಈ ಮೂಲಕ ಬೀಚ್‌ನಲ್ಲಿ ಹಬ್ಬದ ವಾತಾವರಣವನ್ನು ಸೃಷ್ಠಿಸಿ ನೆರೆದಿದ್ದ ಸಾರ್ವಜನಿಕರಿಗೆ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲಾಯಿತು.

ನುರಿತ ಕಲಾವಿದರು ಬೀಚ್‌ಗೆ ಆಗಮಿಸಿದ ಯುವ ಜನತೆ , ಮಹಿಳೆಯರು, ಮಕ್ಕಳ ಮುಖ ಹಾಗೂ ಕೈಗಳಿಗೆ ಮತದಾನದ ಸಂದೇಶ ಸಾರುವ ಆಕರ್ಷಕ ವೈವಿಧ್ಯಮಯ ಪೈಟಿಂಗ್‌ಗಳನ್ನು ಮಾಡಿದರು. ಮಹಿಳೆಯರಿಗೆ ಆಕರ್ಷಕ ಮೆಹಂದಿ ಹಾಕುವ ಮೂಲಕ ಪರಿಣಿತ ಮಹಿಳಾ ಕಲಾವಿದರು ಹಾಗೂ ಪೌರಾಣಿಕ ಪಾತ್ರಗಳ ಗೊಂಬೆಗಳು ಹಾಗೂ ಹಾಸ್ಯಗಾರ ಗೊಂಬೆ ವೇಷಧಾರಿಗಳು ಬೀಚ್‌ನಾದ್ಯಂತ ಸಂಚರಿಸಿ ಮತದಾನ ಜಾಗೃತಿ ಮೂಡಿಸಿದರು.

ಮತದಾನದ ಅರಿವು ಕುರಿತು ಏರ್ಪಡಿಸಲಾಗಿದ್ದ ಯಕ್ಷಗಾನ ಮತ್ತು ಮೈಮ್ ಪ್ರದರ್ಶನ ಜನರಲ್ಲಿ ಜಾಗೃತಿ ಮೂಡಿಸಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯಕಾರ್ಯ ನಿರ್ವಹಣಾ ಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ವಿಕಲಚೇತನ ಇಲಾಖಾಧಿಕಾರಿ ನಿರಂಜನ ಭಟ್, ಶಿಕ್ಷಣಾಧಿಕಾರಿ ನಾಗೇಶ್ ಶಾನುಬೋಗ್, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ., ಪಿಡಿಓಗಳಾದ ಮಹೇಶ್, ಪ್ರಮೀಳಾ, ಜೇಮ್ಸ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News