ತಿರುಪತಿ ದೇವಾಲಯದ ಸ್ವಾಧೀನ ಹಿಂದೆಗೆದ ಎಎಸ್‌ಐ

Update: 2018-05-06 16:40 GMT

ಹೈದರಾಬಾದ್, ಮೇ 6: ದೇಶದ ಅತೀ ಶ್ರೀಮಂತ ದೇವಾಲಯವಾದ ತಿರುಮಲದಲ್ಲಿರುವ ತಿರುಪತಿ ದೇವಾಲಯವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪದ ಪತ್ರವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಶನಿವಾರ ಹಿಂದೆಗೆದುಕೊಂಡಿದೆ.

ಈ ಕುರಿತು ದೇಶದ ಅತೀ ಶ್ರೀಮಂತ ದೇವಾಲಯವನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಂನ ಕಾರ್ಯಕಾರಿ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್‌ಗೆ ಅಮರಾವತಿ ಸರ್ಕಲ್‌ನ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಅಧೀಕ್ಷಕಿ ಆರ್. ಶ್ರೀಲಕ್ಷ್ಮೀ ಪತ್ರ ಬರೆದಿದ್ದಾರೆ. ಪ್ರಾಚೀನತೆ ಹಾಗೂ ಚಾರಿತ್ರಿಕತೆ ಗಮನದಲ್ಲಿರಿಸಿ ತಿರುಮಲದಲ್ಲಿರುವ ತಿರುಪತಿ ಹಾಗೂ ಅದರ ಗುಂಪಿಗೆ ಸೇರಿದ ದೇವಾಲಯಗಳನ್ನು ಸಂರಕ್ಷಿತ ಸ್ಮಾರಕಗಳು ಎಂದು ಘೋಷಿಸಲು ಇರುವ ಕಾರ್ಯಸಾಧ್ಯತೆ ಪರಿಶೀಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಾಣಾಲಯದ ಕೇಂದ್ರ ಕಚೇರಿ ನಿರ್ದೇಶಿಸಿದೆ ಎಂದು ಅವರು ಹೇಳಿದ್ದಾರೆ. ಆದುದರಿಂದ ಟಿಟಿಡಿ ಅಡಿಯಲ್ಲಿ ಬರುವ ಸುತ್ತಮುತ್ತಲಿನ ದೇವಾಲಯಗಳ ವಿವರ ನೀಡುವಂತೆ ನಿಮ್ಮನ್ನು ವಿನಂತಿಸಲಾಗಿದೆ. ಮಾಹಿತಿ ಕಲೆ ಹಾಕಲು ಹಾಗೂ ಛಾಯಾಚಿತ್ರ ತೆಗೆಯಲು ನಿಮ್ಮನ್ನು ಸಂಪರ್ಕಿಸುವ ಭಾರತೀಯ ಸರ್ವೇಕ್ಷಣಾಲಯದ ಅಧಿಕಾರಿಗಳಿಗೆ ಸಹಕರಿಸಿ ಎಂದು ಶ್ರೀಲಕ್ಷ್ಮೀ ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News