ಸಂಸ್ಥೆಗಳ ನಿರ್ದೇಶಕರ ಪಾಸ್‌ಪೋರ್ಟ್ ವಿವರ ಸಂಗ್ರಹಕ್ಕೆ ನಿರ್ಧಾರ

Update: 2018-05-06 16:43 GMT

ಹೊಸದಿಲ್ಲಿ, ಮೇ 6: ವಂಚಕರು ದೇಶ ಬಿಟ್ಟು ಪಲಾಯನ ಮಾಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ, ಸಂಸ್ಥೆಗಳ ನಿರ್ದೇಶಕರ ಪಾಸ್‌ಪೋರ್ಟ್ ವಿವರವನ್ನು ಸಂಗ್ರಹಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಸ್ಥೆಗಳ ನಿರ್ದೇಶಕರ ಪಾಸ್‌ಪೋರ್ಟ್ ವಿವರವನ್ನು ಸಂಗ್ರಹಿಸುವ ಪ್ರಸ್ತಾಪವನ್ನು ಸಚಿವಾಲಯ ಪರಿಶೀಲಿಸುತ್ತಿದೆ. ಹೀಗೆ ಸಂಗ್ರಹಿಸಿದ ವಿವರಗಳು ದೇಶ ಬಿಟ್ಟು ಪಲಾಯನ ಮಾಡುವ ವಂಚಕರನ್ನು ತಡೆಯಲು ಹಾಗೂ ಇಂತವರ ವಿರುದ್ಧ ಸಕಾಲಿಕ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನೆರವಾಗುತ್ತದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಐ.ಶ್ರೀನಿವಾಸ್ ತಿಳಿಸಿದ್ದಾರೆ. ಆರ್ಥಿಕ ವಂಚನೆ ಎಸಗುವ ಅಪರಾಧಿಗಳು ಬಳಿಕ ಭಾರತೀಯ ನ್ಯಾಯಾಲಯಗಳ ಅಧಿಕಾರ ಕ್ಷೇತ್ರದಿಂದ ತಪ್ಪಿಸಿಕೊಂಡು ವಿದೇಶಕ್ಕೆ ಪಲಾಯನ ಮಾಡುತ್ತಿರುವ ಹಲವಾರು ಘಟನೆಗಳು ನಡೆದಿವೆ. ಇಂತಹ ಪ್ರಕರಣಗಳಿಗೆ ತಡೆಯೊಡ್ಡುವ ಪ್ರಸ್ತಾಪವನ್ನು ಪರಿಶೀಲಿಸಲಾಗುತ್ತಿದೆ ಎಂದು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ. ಕಂಪೆನಿಗಳ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯು ಅಕ್ರಮ ಹಣದ ಹರಿವನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಂಡಿದ್ದು ಈಗಾಗಲೇ ದೀರ್ಘಾವಧಿಯಿಂದ ವ್ಯವಹಾರ ನಡೆಸದಿರುವ 2.6 ಲಕ್ಷಕ್ಕೂ ಹೆಚ್ಚು ಸಂಸ್ಥೆಗಳ ನೋಂದಣಿ ರದ್ದುಗೊಳಿಸಿದೆ. ಅಲ್ಲದೆ ನಿಯಮ ಉಲ್ಲಂಘಿಸಿದ ನೋಂದಾಯಿತ ಸಂಸ್ಥೆಗಳ 3 ಲಕ್ಷಕ್ಕೂ ಹೆಚ್ಚು ನಿರ್ದೇಶಕರನ್ನು ಕಳೆದ ವರ್ಷ ಅನರ್ಹಗೊಳಿಸಿದೆ.

ಕಳೆದ ತಿಂಗಳು ಕೇಂದ್ರ ಸರಕಾರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಆಧ್ಯಾದೇಶವನ್ನು ಘೋಷಿಸಿದ್ದು, ಇದರ ಪ್ರಕಾರ ಹಣ ವಂಚಿಸಿ ದೇಶ ಬಿಟ್ಟು ಪಲಾಯನ ಮಾಡುವ ವಂಚಕರ ಅಕ್ರಮ ಆಸ್ತಿಯನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.ಅಲ್ಲದೆ ಓರ್ವ ವ್ಯಕ್ತಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲು , ಆತ ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಮಾರಾಟ ಮಾಡಲು ಈ ಆಧ್ಯಾದೇಶ ಅವಕಾಶ ಮಾಡಿಕೊಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News