ಎಚ್-1ಬಿ ಸಂಗಾತಿಗಳಿಗೆ ಕೆಲಸ ಮಾಡಲು ಅವಕಾಶ ಕೋರುವ ಮನವಿ: 33 ಸಂಸದರ ಸಹಿ

Update: 2018-05-06 17:14 GMT

ವಾಶಿಂಗ್ಟನ್, ಮೇ 6: ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡುವ 2015ರ ಕಾನೂನನ್ನು ರದ್ದುಗೊಳಿಸುವ ನಿರ್ಧಾರವನ್ನು ಮರುಪರಿಶೀಲನೆ ನಡೆಸುವಂತೆ ಕೋರುವ ಮನವಿಗೆ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್- ಎರಡೂ ಪಕ್ಷಗಳ 33 ಸಂಸದರು ಸಹಿ ಹಾಕಿದ್ದಾರೆ.

ಒಬಾಮ ಕಾಲದ ಕಾನೂನು ‘‘ನಮ್ಮ ಆರ್ಥಿಕತೆಯನ್ನು ಬಲಗೊಳಿಸಿದೆ ಹಾಗೂ ಅಮೆರಿಕದಲ್ಲಿ ವರ್ಷಗಳಿಂದ ನೆಲೆಸಿರುವ ಸಾವಿರಾರು ಸಂಗಾತಿಗಳಿಗೆ (ಹೆಚ್ಚಿನವರು ಮಹಿಳೆಯರು) ನೆಮ್ಮದಿ ಮತ್ತು ಆರ್ಥಿಕ ಬೆಂಬಲವನ್ನು ನೀಡಿದೆ’’ ಎಂದು ಮನವಿ ಹೇಳಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಪ್ರಮೀಳಾ ಜಯಪಾಲ್ ಮತ್ತು ಸಹೋದ್ಯೋಗಿ ಮಿಯಾ ಲವ್ ಆರಂಭಿಸಿರುವ ಪತ್ರವು ಈಗ ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಸ್ಥಾನ ‘ಕ್ಯಾಪಿಟಲ್ ಹಿಲ್’ನಲ್ಲಿ ಹರಿದಾಡುತ್ತಿದೆ.

ಮೇ 9ರ ಒಳಗೆ ಇನ್ನೂ ಹಲವು ಸಂಸದರು ಮನವಿಗೆ ಸಹಿ ಹಾಕುತ್ತಾರೆಂದು ನಿರೀಕ್ಷಿಸಲಾಗಿದೆ. ಮೇ 9ರಂದು ಮನವಿಯನ್ನು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್) ಉಸ್ತುವಾರಿ ಹೊಂದಿರುವ ಆಂತರಿಕ ಭದ್ರತೆ ಇಲಾಖೆಯ ಕಾರ್ಯದರ್ಶಿ ಕ್ರಿಶ್ಚಿಯನ್ ನೀಲ್ಸನ್‌ರಿಗೆ ಸಲ್ಲಿಸಲಾಗುವುದು. ಇದೇ ಇಲಾಖೆಯು ಒಬಾಮ ಕಾಲದ ಕಾನೂನನ್ನು ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News