ಪಾಕ್: ಅವಳಿ ಗಣಿ ಕುಸಿತ; 23 ಕಾರ್ಮಿಕರ ಸಾವು
Update: 2018-05-06 22:49 IST
ಕ್ವೆಟ್ಟ (ಪಾಕಿಸ್ತಾನ), ಮೇ 6: ನೈರುತ್ಯ ಪಾಕಿಸ್ತಾನದ ಎರಡು ಕಲ್ಲಿದ್ದಲು ಗಣಿಗಳಲ್ಲಿ ಅನಿಲ ಸ್ಫೋಟ ಸಂಭವಿಸಿದ್ದು, 23 ಮಂದಿ ಮೃತಪಟ್ಟಿದ್ದಾರೆ ಹಾಗೂ 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಬಲೂಚಿಸ್ತಾನ ಪ್ರಾಂತದ ಮರ್ವಾರ್‌ನಲ್ಲಿರುವ ಗಣಿಯೊಂದರಲ್ಲಿ ಶನಿವಾರ ಮಧ್ಯಾಹ್ನ ಮೀಥೇನ್ ಅನಿಲ ಸಂಗ್ರಹಗೊಂಡು ಸ್ಫೋಟ ಸಂಭವಿಸಿತು ಹಾಗೂ ಗಣಿಯ ಸುರಂಗ ಕುಸಿಯಿತು.
ಆ ಸಮಯದಲ್ಲಿ ಗಣಿಯೊಳಗಿದ್ದ 25 ಮಂದಿಯ ಪೈಕಿ 16 ಮಂದಿ ಪ್ರಾಣ ಕಳೆದುಕೊಂಡರು ಹಾಗೂ ಉಳಿದವರನ್ನು ರಕ್ಷಿಸಲಾಗಿದೆ.
ಇದರ ಮೂರು ಗಂಟೆಗಳ ಬಳಿಕ, ಈ ಗಣಿಯಿಂದ 25 ಕಿಲೋ ಮೀಟರ್ ದೂರದ ಸ್ಪಿನ್ ಕರೇಝ್‌ನಲ್ಲಿರುವ ಗಣಿಯೊಂದು ಇಂಥದೇ ಸನ್ನಿವೇಶದಲ್ಲಿ ಕುಸಿಯಿತು ಹಾಗೂ ಈ ಘಟನೆಯಲ್ಲಿ ಒಳಗೆ ಕೆಲಸ ಮಾಡುತ್ತಿದ್ದ 9 ಕಾರ್ಮಿಕರ ಪೈಕಿ 7 ಮಂದಿ ಮೃತಪಟ್ಟರು.