×
Ad

ಎಸ್‌ಐಒ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

Update: 2018-05-07 18:02 IST

ಮಂಗಳೂರು, ಮೇ 7: ರಾಜ್ಯ ಸರಕಾರ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಿಷೇಧಿಸಿರುವುದರಿಂದ ವಿದ್ಯಾರ್ಥಿ ಸಮೂಹವು ಹಲವಾರು ಸಮಸ್ಯೆ ಗಳನ್ನು ಎದುರಿಸುತ್ತಿವೆ. ಆ ಸಮಸ್ಯೆಗಳ ಪರಿಹಾರಕ್ಕಾಗಿ ಸ್ವತಃ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರ ಶ್ರಮಿಸುತ್ತಿಲ್ಲ. ಆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸ್ಪಂದಿಸಲಿ ಎಂಬ ನಿಟ್ಟಿನಲ್ಲಿ ಎಸ್‌ಐಒ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆಯನ್ನು ಸೋಮವಾರ ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌ಐಒ ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್ ಬಿಡುಗಡೆಗೊಳಿಸಿದ್ದಾರೆ.

ರಾಜಕೀಯ ಪಕ್ಷಗಳು ವಿದ್ಯಾರ್ಥಿ ಯುವ ಮತದಾರರನ್ನು ಸೆಳೆಯಲು ಪ್ರಯತ್ನಿಸುವ ಬದಲು ಮತದಾರರನ್ನು ಧರ್ಮ, ಜಾತಿ, ಲಿಂಗದ ಆಧಾರದ ಮೇಲೆ ವಿಭಜಿಸಿ ಮತ ಪಡೆಯುತ್ತಿದೆ. ಜಿಲ್ಲೆಯಲ್ಲಿ ಮೊದಲ ಬಾರಿ ಮತ ಚಲಾಯಿಸುವ ಶೇ.2.5ರಷ್ಟು ಮತದಾರರಿದ್ದು, ಅವರಿಗೆ ನ್ಯಾಯ ನೀಡುವ ಸಲುವಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ತಲ್ಹಾ ಇಸ್ಮಾಯೀಲ್ ನುಡಿದರು.

ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು, ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸರಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಉಚಿತ ಬಸ್ ಪಾಸ್ ನೀಡಬೇಕು, ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪ್ರತ್ಯೇಕ ವಿದ್ಯಾರ್ಥಿ ಸ್ನೇಹಿ ವಿಶ್ರಾಂತಿ ಕೊಠಡಿ ತೆರೆಯಬೇಕು, ಶಾಲಾ ಕಾಲೇಜುಗಳ 200 ಮೀ. ಅಂತರದಲ್ಲಿ ತೆರೆಯಲಾಗುವ ಅಮಲು ಪದಾರ್ಥ, ಮದ್ಯಪಾನ, ತಂಬಾಕು ಸೇವನೆ ಮತ್ತು ಮಾರಾಟವನ್ನು ನಿಷೇಧಿಸಬೇಕು, 300ಕ್ಕೂ ಅಧಿಕ ವಿದ್ಯಾರ್ಥಿಗಳಿಗಿರುವ ಶಾಲಾ ಕಾಲೇಜುಗಳಲ್ಲಿ ಡಿ ಎಡಿಕ್ಷನ್ ಸೆಂಟರ್ ಮತ್ತು ಕ್ಯಾರಿಯರ್ ಕೌನ್ಸಿಲಿಂಗ್ ಸೆಂಟರ್ ತೆರೆಯಬೇಕು, ಲಿಂಗ್ಡೋ ಕಮಿಷನ್ ವರದಿ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಬೇಕು, ಸಾಚಾರ್ ಸಮಿತಿ ವರದಿ ಜಾರಿಗೊಳಿಸಬೇಕು, ಜಿಎಸ್‌ಸಿಎಎಸ್‌ಎಚ್ ಮಾದರಿಯಲ್ಲಿ ಎಲ್ಲ ಕಾಲೇಜುಗಳಲ್ಲಿ ಎಂಪವರ್‌ಮೆಂಟ್ ಸೆಲ್ ರಚಿಸಬೇಕು, ವಿದೇಶಿ ವಿದ್ಯಾರ್ಥಿಗಳು ಮತ್ತಿತರ ರಾಜ್ಯದ ವಿದ್ಯಾರ್ಥಿಗಳಿಗೆ ಸುರಕ್ಷತೆಯ ಭರವಸೆ ನೀಡಲು ಮಂಗಳೂರನ್ನು ವಿಶ್ವದ ವಿದ್ಯಾ ಕೇಂದ್ರವನ್ನಾಗಿ ಆಕರ್ಷಿಸಲು ಜಿಲ್ಲಾಧಿಕಾರಿಯ ಮೇಲ್ವಿಚಾರಣೆಯಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಹೆಲ್ಪ್ ಡೆಸ್ಕ್ ತೆರೆಯಬೇಕು ಎಂದು ಎಸ್‌ಐಒ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಸ್ವ ಉದ್ಯೋಗವನ್ನು ಪ್ರೋತ್ಸಾಹಿಸಲು ಎಲ್ಲಾ ಕ್ಯಾಂಪಸ್‌ನಲ್ಲಿ ಇನ್‌ಕ್ಯುಬೇಶನ್ ಸೆಂಟರ್ ಮಾದರಿಯಲ್ಲಿ ಸ್ಟಾರ್ಟ್ ಅಪ್ ಸೆಲ್ ಸ್ಥಾಪಿಸಬೇಕು, ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಸಂಶೋಧನಾ ಕೇಂದ್ರ ತೆರೆಯಬೇಕು, ಚೈಲ್ಡ್ ಹೆಲ್ಪ್‌ಲೈನ್ ಬಲಪಡಿಸಲು ಗ್ರಾಪಂ ಅಥವಾ ತಾಲೂಕು ಕಚೇರಿಯಲ್ಲಿ ಕಲ್ಯಾಣ ಅಧಿಕಾರಿ ನೇಮಿಸಬೇಕು, ಅಲ್ಪಸಂಖ್ಯಾತರ ಶಾಲಾ ಕಾಲೇಜುಗಳಲ್ಲಿ ಶೇ.25ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು, ಮದ್ರಸ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿಣಿಗೆ ತರಲು ಮಂಗಳೂರು ವಿವಿಯಲ್ಲಿ ಅಲಿಘರ್ ಮುಸ್ಲಿಂ ವಿವಿ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮೀಯಾ ವಿವಿ ಮಾದರಿಯ 6 ತಿಂಗಳ ಬ್ರಿಡ್ಜ್ ಕೋರ್ಸ್ ತೆರೆಯಬೇಕು, ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪಿಸಬೇಕು, ಮತೀಯ ಗೂಂಡಾಗಿರಿ ತಡೆಯಲು ಹೊಸ ಕಾನೂನು ರಚಿಸಬೇಕು ಎಂದು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಎಸ್‌ಐಒ ದ.ಕ.ಜಿಲ್ಲಾ ಕಾರ್ಯದರ್ಶಿ ಅಫ್ನಾನ್ ಹಸನ್, ಮಂಗಳೂರು ನಗರ ಅಧ್ಯಕ್ಷ ಡಾ. ಮಿಸ್‌ಅಬ್ ಇಸ್ಮಾಯೀಲ್, ನಗರ ಕಾರ್ಯದರ್ಶಿ ಮುಬೀನ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News