ಕಾಂಗ್ರೆಸ್ ಮುಸಲ್ಮಾನರಿಗಿಂತಲೂ ಅಪಾಯಕಾರಿ: ಶಾಸಕ ಅಂಗಾರ

Update: 2018-05-07 14:16 GMT

ಪುತ್ತೂರು, ಮೇ 7: ಮುಸಲ್ಮಾನರು ತಮ್ಮ ಸಮುದಾಯವನ್ನು ಬಲಿಷ್ಠ ಮಾಡುವಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಹಿಂದೂಗಳನ್ನು ಒಡೆಯುವ ಕೆಲಸದಲ್ಲಿ ನಿರತವಾಗಿದೆ. ಆದ್ದರಿಂದ ಕಾಂಗ್ರೆಸ್ ಮುಸಲ್ಮಾನರಿಗಿಂತಲೂ ಅಪಾಯಕಾರಿ ಎಂದು ಸುಳ್ಯ ಶಾಸಕ ಅಂಗಾರ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಅವರು ಪುತ್ತೂರು ಡಿಸಿಸಿ ಸಭಾಂಗಣದಲ್ಲಿ ಸೋಮವಾರ ನಡೆದ ಬಿಜೆಪಿ ಎಸ್‌ಸಿ ಎಸ್ಟಿ ಮೋರ್ಚಾ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳನ್ನು ದಮನ ಮಾಡುವ ನಿಟ್ಟಿನಲ್ಲೇ ಯೋಚನೆ ಮತ್ತು ಯೋಜನೆ ರೂಪಿಸುತ್ತಿದೆ. ಮೌಢ್ಯ ಪ್ರತಿಬಂಧಕ ಕಾಯ್ದೆ ತರುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ. ಈ ಮೂಲಕ ಮುಸಲ್ಮಾನರ ಓಲೈಕೆ ಮಾಡುತ್ತಿದೆ. ಹಿಂದೂಗಳ ನಡುವೆಯೇ ವೈಷಮ್ಯ ಭಿತ್ತಿ, ತಾನು ಅಧಿಕಾರದಲ್ಲಿ ಇರಬೇಕೆಂದು ಬಯಸುತ್ತಿದೆ. ಆದರೆ ಇದನ್ನು ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಬಿಜೆಪಿ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಗೆಲುವು ಪಡೆದುಕೊಳ್ಳಲಿದೆ ಎಂದರು.

ತನ್ನಲ್ಲಿ ಬೇನಾಮಿ ಆಸ್ತಿ ಇದೆ ಎಂದು ಕಾಂಗ್ರೆಸಿಗರು ಆರೋಪ ಮಾಡುತ್ತಿದ್ದಾರೆ. ಇಂತಹ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಾಗೊಂದು ವೇಳೆ ತನ್ನಲ್ಲಿ ಬೇನಾಮಿ ಆಸ್ತಿ ಇದ್ದರೆ ಅದೆಲ್ಲವನ್ನೂ ಕಾಂಗ್ರೆಸಿನವರಿಗೇ ಉದಾರವಾಗಿ ನೀಡಲಾಗುವುದು ಎಂದು ಘೋಷಿಸಿದರು.

ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಮಾತನಾಡಿ, ಗಂಗಾ ಕಲ್ಯಾಣ ಯೋಜನೆ ಮೊದಲು ಪುತ್ತೂರಿನಲ್ಲಿ ಸರಿಯಾಗಿಯೇ ಜಾರಿ ಆಗುತ್ತಿತ್ತು. ಆದರೆ ಕಳೆದ ಐದು ವರ್ಷದ ಅವಧಿಯಲ್ಲಿ ಇದು ಫಲಾನುಭವಿಗಳಿಗೆ ಸಿಗುತ್ತಿಲ್ಲ. ತಮಗೆ ಬೇಕಾದ ವ್ಯಕ್ತಿಗಳಿಗೆ ಗಂಗಾ ಕಲ್ಯಾಣ ಯೋಜನೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ 65 ವರ್ಷದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸಿದ್ದು ಮಾತ್ರ. ಹಿಂದುಳಿದ ವರ್ಗಕ್ಕೆ ಯಾವುದೇ ರೀತಿಯ ಪ್ರಯೋಜನ ಮಾಡಿಲ್ಲ. ಅಂಬೇಡ್ಕರ್ ಅವರ ಹೆಸರನ್ನೂ ಕಾಂಗ್ರೆಸ್ ತನ್ನ ಲಾಭಕ್ಕೆ ಮಾತ್ರ ಬಳಸಿಕೊಳ್ಳುತ್ತಿದೆ. ಇವರಿಗೆ ಅಂಬೇಡ್ಕರ್ ಅವರ ಹೆಸರನ್ನು ಹೇಳುವ ನೈತಿಕತೆಯೂ ಇಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿದ್ದು, ಎನ್‌ಡಿಎ ಸರಕಾರ. ಅವರ ಆಶಯಗಳನ್ನು ಈಡೇರಿಸುವಲ್ಲಿ ಬಿಜೆಪಿ ಬದ್ಧವಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಾವು ಹಲವರನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಮತ್ತೊಮ್ಮೆ ಅವಕಾಶ ನೀಡಬಾರದು. ಹಿಂದುತ್ವದ ಆಧಾರದಲ್ಲಿ ಆಶೀರ್ವಾದ ಮಾಡುವಂತೆ ಕೇಳಿಕೊಂಡರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಹೆಚ್ಚಿನ ಅನುದಾನಗಳು ರಾಜ್ಯಕ್ಕೆ ಬಂದು, ಅನುಷ್ಠಾನ ಆಗಬೇಕಾದರೆ ರಾಜ್ಯದಲ್ಲೂ ಬಿಜೆಪಿ ಸರಕಾರ ಅಧಿಕಾರ ಹಿಡಿಯುವ ಅಗತ್ಯ ಇದೆ. ಕಳೆದ 65 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಜನರಿಗಾಗಿ ಏನೂ ಮಾಡಿಲ್ಲ. ಜನರ ಬೇಡಿಕೆ ಈಡೇರಬೇಕಾದರೆ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಎಸ್ಸಿ ಮೋರ್ಚಾದ ಅಧ್ಯಕ್ಷೆ ಭಾಗೀರಥಿ, ಪುತ್ತೂರು ಎಸ್ಸಿ ಮೋರ್ಚಾದ ಅಧ್ಯಕ್ಷ ಕಿಟ್ಟು ಅಜಿಲ, ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

ಗುರುವ ಮರಿಕೆ ಸ್ವಾಗತಿಸಿದರು. ಅಣ್ಣು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News