ದಲಿತರಿಗೆ ಮನ್ನಣೆ ನೀಡದ ಬಿಜೆಪಿ: ಕಾಂಗ್ರೆಸ್ ಪರಿಶಿಷ್ಟ ಘಟಕ ಆರೋಪ

Update: 2018-05-08 13:44 GMT

ಮಂಗಳೂರು, ಮೇ 8: ದಲಿತರಿಗೆ ರಾಜಕೀಯ ಮಾತ್ರವಲ್ಲದೆ ಸಾಮಾಜಿಕವಾಗಿಯೂ ಸೂಕ್ತ ಸ್ಥಾನಮಾನ ನೀಡದೆ ಬಿಜೆಪಿ ಅನ್ಯಾಯ ಎಸಗುತ್ತಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಸಂಚಾಲಕ ಟಿ.ಹೊನ್ನಯ್ಯ ಆರೋಪಿಸಿದ್ದಾರೆ.

ನಗರದ ಕದ್ರಿಯಲ್ಲಿರುವ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ದಲಿತರ ಅಭಿವೃದ್ಧಿಗೆ ಏನೇನೂ ಮಾಡಿಲ್ಲ. ಸತತ 5 ಬಾರಿ ಸುಳ್ಯ ಮೀಸಲು ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾದ ಎಸ್.ಅಂಗಾರರಿಗೆ ಮಂತ್ರಿ ಸ್ಥಾನದ ನೀಡದ ಬಿಜೆಪಿ ಮುಖಂಡರು ಇದೀಗ ಚುನಾವಣೆಯ ಸಂದರ್ಭ ಮಂತ್ರಿ ಸ್ಥಾನದ ಭರವಸೆ ನೀಡುತ್ತಿರುವುದು ವಿಪರ್ಯಾಸ ಎಂದರು.

ಕಾಂಗ್ರೆಸ್ ಎಂದೂ ಕೂಡ ದಲಿತರಿಗೆ ಅನ್ಯಾಯ ಎಸಗಿಲ್ಲ. ಮೀಸಲು ಕ್ಷೇತ್ರವಲ್ಲದೆ ಸಾಮಾನ್ಯ ಕ್ಷೇತ್ರದಲ್ಲೂ ದಲಿತರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿವೆ. ಅಷ್ಟೇ ಅಲ್ಲ, ಪಕ್ಷದಲ್ಲೂ ಸೂಕ್ತ ಸ್ಥಾನಮಾನ ನೀಡಿದೆ. ಆದರೆ ಬಿಜೆಪಿ ದಲಿತರಿಗೆ ಅಂತಹ ಅವಕಾಶ ನೀಡಿಲ್ಲ. ಇದು ಬಿಜೆಪಿಯ ದಲಿತ ವಿರೋಧಿ ನೀತಿಗೆ ಸಾಕ್ಷಿ ಎಂದರು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಂತೂ ಶಾಸಕ ಜೆ.ಆರ್.ಲೋಬೊ ದಲಿತರ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ವಿಶೇಷ ಅನುದಾನ ಯೋಜನೆಯಡಿ ದಲಿತ ಕಾಲನಿಗಳ ಅಭಿವೃದ್ಧಿಗೊಳಿಸಿದ್ದಾರೆ. ಹಾಗಾಗಿ ಲೋಬೊರಿಗೆ ಮತ ನೀಡಿ ಅವರಿಗೆ ಶಕ್ತಿ ತುಂಬಬೇಕಿದೆ. ಅದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅನೇಕ ಜನಪರ ಯೋಜನೆಗಳನ್ನು ದಲಿತರಿಗೆ ಕಲ್ಪಿಸಿದ್ದಾರೆ. ಹಾಗಾಗಿ ಅವರ ಬಲಪಡಿಸಲು ಜಿಲ್ಲೆಯ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಹೊನ್ನಯ್ಯ ಅಭಿಪ್ರಾಯಪಟ್ಟರು.

ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಕೇಂದ್ರ ಸಚಿವರೊಬ್ಬರು ಹೇಳಿಕೆ ನೀಡುವ ಮೂಲಕ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆ. ಪ್ರಚಾರಕ್ಕಾಗಿ ದಲಿತರ ಮನೆಗಳಿಗೆ ಭೇಟಿ ನೀಡಿ ಹೊಟೇಲಿನಿಂದ ತಂದ ಊಟ ತಿಂದು ಪ್ರಚಾರ ಗಿಟ್ಟಿಸಿಕೊಳ್ಳುವ ಬಿಜೆಪಿಯ ತಂತ್ರ ಎಂದಿಗೂ ಫಲಿಸದು. ಭಡ್ತಿ ಮೀಸಲಾತಿಯನ್ನು ಹಿಂಪಡೆಯುವ ಮೂಲಕ ದಲಿತರು ಸರಕಾರಿ ಉನ್ನತ ಹುದ್ದೆಯಿಂದ ವಂಚಿತರಾಗುವಂತೆ ಮಾಡುವ ಹುನ್ನಾರವನ್ನೂ ಕೂಡ ಬಿಜೆಪಿ ಮಾಡಿದೆ ಎಂದು ಹೊನ್ನಯ್ಯ ಆಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್‌ಗಳಾದ ಅಪ್ಪಿ, ನಾಗವೇಣಿ, ರಜನೀಶ್, ಪಕ್ಷದ ದಲಿತ ಮುಖಂಡರಾದ ರಘುರಾಜ್ ಕದ್ರಿ, ಪ್ರೇಮ್ ಬಲ್ಲಾಲ್‌ಬಾಗ್, ದಿನೇಶ್ ಪಿ.ಎಸ್., ಮಿಥುನ್ ಉರ್ವ, ವಿಜಯಲಕ್ಷ್ಮಿ ಕೆ.ಪಿ., ಪ್ರಕಾಶ್ ಕೋಡಿಕಲ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News