ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಡಾಮಕ್ಕಿ ಗ್ರಾಪಂ ಅಧ್ಯಕ್ಷರ ಮನೆಗೆ ಕಲ್ಲು ತೂರಾಟ

Update: 2018-05-08 08:19 GMT

ಕುಂದಾಪುರ, ಮೇ 8: ಕುಂದಾಪುರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾರ್ಯವೈಖರಿಯಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡಿ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ರಾಜೀವ ಕುಲಾಲ್ ಮನೆಗೆ ಕಿಡಿಗೇಡಿಗಳ ತಂಡ ಕಲ್ಲು ಎಸೆದು ಹಾನಿಗೈದಿರುವ ಘಟನೆ ಮೇ 7ರಂದು ರಾತ್ರಿ 9:45ರ ಸುಮಾರಿಗೆ ನಡೆದಿದೆ.

ಮಡಾಮಕ್ಕಿ ಸಮೀಪದ ಬೆಪ್ಡೆ ನಿವಾಸಿಯಾಗಿರುವ ರಾಜೀವ ಕುಲಾಲ್ ರಾತ್ರಿ ತನ್ನ ಸ್ಕೂಟಿಯಲ್ಲಿ ಅಂಗಡಿಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ಕಿಡಿಗೇಡಿಗಳು ಮನೆಯ ಮೇಲೆ ಕಲ್ಲುಗಳನ್ನು ಎಸೆಯಲಾರಂಭಿಸಿದರು. ಇದರಿಂದ ಪತ್ನಿ, ಮಕ್ಕಳು ಭಯಭೀತಗೊಂಡಿದ್ದರು. ಕಲ್ಲೆಸೆದಿಂದ ಗೇಟಿನ ಆವರಣಕ್ಕೆ ಅಳವಡಿಸಲಾದ ವಿದ್ಯುದ್ದೀಪ ಪುಡಿ ಪುಡಿಯಾಗಿದೆ. ಅಲ್ಲದೆ ಮನೆಯ ಗೋಡೆಯವರೆಗೂ ಕಲ್ಲು ಬಂದು ಬಿದ್ದಿರುವುದು ಕಂಡುಬಂದಿದೆ. ಈ ಕೃತ್ಯ ಎಸಗಿದ ಐವರ ತಂಡ ಕೈಯಲ್ಲಿ ಆಯುಧಗಳನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ವಿಷಯ ತಿಳಿದು ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ ಹೆಗ್ಡೆ, ಬೆಳ್ವೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಉದಯಕುಮಾರ್ ಪೂಜಾರಿ, ನಾಯಕರಾದ ಸುರೇಶ್ ಶೆಟ್ಟಿ ಆರ್ಡಿ, ಉದಯ ಕುಮಾರ್ ಶೆಟ್ಟಿ ಶೇಡಿಮನೆ, ಶಂಕರನಾರಾಯಣ ಠಾಣಾಧಿಕಾರಿ ರಾಘವೇಂದ್ರ, ಅಮಾಸೆಬೈಲು ಠಾಣಾಧಿಕಾರಿ ಕೆ.ಪ್ರಕಾಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಜೀವ ಕುಲಾಲ್‌ರ ಮನೆಗೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ರಾಜೀವ ಕುಲಾಲ್ ಹಲವು ವರ್ಷಗಳಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು ಕಳೆದ ಬಾರಿ ಗ್ರಾಪಂ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾಗಿ ನಂತರ ಅಧ್ಯಕ್ಷರಾಗಿದ್ದರು. ಕ್ಷೇತ್ರದ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿದ್ದ ರಾಜೀವ ಕುಲಾಲ್ ಸ್ಥಳೀಯ ಇತರ ಬಿಜೆಪಿ ಮುಖಂಡರೊಂದಿಗೆ ಮೇ 4ರಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಮೇ 6ರಂದು ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.


ಹೆದರುವ ಪ್ರಶ್ನೆಯೇ ಇಲ್ಲ: ಕುಲಾಲ್
‘ಮೇ 8ರಂದು ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ನಡೆಸಲು ಬೃಹತ್ ತಯಾರಿ ನಡೆಸಿದ್ದೆ. ನಾವು ಕಾರ್ಯಕರ್ತರನ್ನು ಒಗ್ಗೂಡಿಸುತ್ತಿರುವುದು ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ. ನಮ್ಮನ್ನು ಬೆದರಿಸಿದರೆ ಎಲ್ಲರೂ ಕೂಡ ಹೆದರಬಹುದೆಂದು ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು. ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆಯಿಲ್ಲ. ಮುಂದೆಯು ಕಾಂಗ್ರೆಸ್ ಪರ ಮತ ಯಾಚನೆ ಮಾಡಲಿದ್ದೇನೆ ಎಂದು ಗ್ರಾಪಂ ಅಧ್ಯಕ್ಷ ರಾಜೀವ ಕುಲಾಲ್ ತಿಳಿಸಿದ್ದಾರೆ.

ರಾಜಕೀಯ ದ್ವೇಷದಿಂದಲೇ ಈ ಕೃತ್ಯ ನಡೆದಿದ್ದು, ಸ್ಥಳೀಯವಾಗಿ ಇಬ್ಬರಿಗೆ ನನ್ನ ಮೇಲೆ ದ್ವೇಷವಿದೆ. ಅವರ ಮೇಲೆ ನನಗೆ ಅನುಮಾನವಿದ್ದು, ಈ ಕುರಿತು ದೂರು ನೀಡಿದ್ದೇನೆ. ಬೆಪ್ಡೆ ಪರಿಸರದಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಇರಲಿಲ್ಲ. ಇದನ್ನು ಬಳಸಿಕೊಂಡೆ ಕಿಡಿಗೇಡಿಗಳು ವ್ಯವಸ್ಥಿತವಾಗಿ ದಾಳಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News